ಸಂಗೀತವೂ ಸೇರಿದಂತೆ ಯಾವುದೇ ಪ್ರದರ್ಶನ ಕಲೆಗಳ ರಸಾಸ್ವಾದನೆಯಲ್ಲಿ ಭಾವನಾತ್ಮಕ

“ಸಂಗೀತವೂ ಸೇರಿದಂತೆ ಯಾವುದೇ ಪ್ರದರ್ಶನ ಕಲೆಗಳ ರಸಾಸ್ವಾದನೆಯಲ್ಲಿ ಭಾವನಾತ್ಮಕ ಹಾಗೂ ಬೌದ್ಧಿಕ ಎಂದು ಎರಡು ಬಗೆ.ಕಲೆಗಳ ವ್ಯಾಕರಣ ತಿಳಿಯದೆ ರಸಾಸ್ವಾದನೆ ಸಹಜವಾಗಿ ಹೃದಯಪೂರ್ವಕವಾಗಿ ನಡೆದರೆ  ಅದು ಭಾವನಾತ್ಮಕ;ಬೌದ್ಧಿಕ ರಸಗ್ರಹಣವು ಭಾವನೆಗಳ ಜತೆಗೆ ಕಲೆಯ ಸೌಂದರ್ಯಕ್ಕೆ ಕಾರಣವಾಗುವ ಅಂಶಗಳನ್ನು ಗ್ರಹಿಸುವ ಮಾರ್ಗವಾಗಿದೆ.ಇದು ‘ ಸಂಸ್ಕಾರಭರಿತ’ ಸಹೃದಯನ ಉದಯಕ್ಕೆ ಮತ್ತು  ಎಚ್ಚರದ ರಸಪ್ರಶಂಸೆಗೆ ಕಾರಣವಾಗುತ್ತದೆ.” ಎಂದು  ಕಲಾವಿದೆ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಶೋಧನ ವಿದ್ಯಾರ್ಥಿ ಕುಮಾರಿ ಶ್ರಾವ್ಯಾ ಬಾಸ್ರಿ ಈ ಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಲಾದ ಸಂಗೀತ ರಸಗ್ರಹಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಈ ಮಾತುಗಳನ್ನು ಆಡಿದರು.ನಮ್ಮ ನಡುವಿನ,ನಮ್ಮೊಳಗಿನ ಸಂಗೀತದಲ್ಲಿ ಶ್ರುತಿ,ಲಯ,ರಾಗ,ತಾಳ,ಭಾವ ಇತ್ಯಾದಿಗಳ ಸಜೀವ ಸಂಬಂಧವನ್ನು ಶ್ರಾವ್ಯ ಬಾಸ್ರಿ  ಪ್ರಾತ್ಯಕ್ಷಿಕವಾಗಿ  ಮಾಡಿ ತೋರಿಸಿದರಲ್ಲದೆ ವಿವಿಧ ಬಗೆಯ ಗೀತೆಗಳನ್ನು ವಿದ್ಯಾರ್ಥಿ ಶಿಕ್ಷಕರಿಂದ  ಹಾಡಿಸಿದರು. ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದರು. ಡಾ ಮಹಾಬಲೇಶ್ವರ ರಾವ್ ಸ್ವಾಗತ ಕೋರಿ ಶ್ರಾವ್ಯಾ ಅವರನ್ನು ಪರಿಚಯಿಸಿದರೆ ಕು.ನಿರುತಾ ಭಟ್ ಸ್ಮರಣಿಕೆ ನೀಡಿದರು.ಕು .ಭವ್ಯ ಕಿಣಿ ಧನ್ಯವಾದ ಸಮರ್ಪಣೆ ಮಾಡಿದರು.