“ಸಾಧನೆಗೆ ಮೊದಲ ಹೆಜ್ಜೆಯೇ ಒಳ್ಳೆಯ ಯೋಜನೆ”


ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ. ಬಿ.ಎಲ್.ಶಂಕರನಾರಾಯಣ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವನ್ ಗುಡ್ ಸ್ಟೆಪ್’ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕಿ ಶ್ರೀಮತಿ ಅಮಿತಾ ಪೈಯವರು ‘ಒಂದು ಒಳ್ಳೆಯ ಮೊದಲ ಹೆಜ್ಜೆ-ನನ್ನ ಜೀವನದ ತಾತ್ವಿಕತೆ’ ಎಂಬ ವಿಚಾರವನ್ನು ಕುರಿತು ಮಹತ್ತರ ಸಾಧನೆಗೆ ಒಳ್ಳೆಯ ಯೋಜನೆ, ಆಲೋಚನೆ, ತಾಳ್ಮೆ ಧೈರ್ಯಬೇಕು ಎಂಬುದಾಗಿ ಹೇಳಿದರು.
ಉತ್ತಮ ಸಾಧನೆಯ ಮೊದಲ ಹೆಜ್ಜೆಯೇ ಯೋಜನೆ ಆ ಪಥದಲ್ಲಿ ಸಾಗಲು ನಮ್ಮ ಜೊತೆ ಯಾರೂ ಇಲ್ಲದಿದ್ದರೂ ಧೈರ್ಯದಿಂದ, ತಾಳ್ಮೆಯಿಂದ ಸಮಸ್ಯೆಗಳನ್ನು ಎದುರಿಸುತ್ತಾ ಮುನ್ನಡೆಯಬೇಕು. ಇದು ನಮ್ಮ ಜೀವನ ತತ್ತ÷್ವವಾಗಬೇಕು ಎಂದು ಸಾಧನೆಯ ಮಾರ್ಗಗಳನ್ನು ತಮ್ಮ ಬದುಕಿನ ಸಾಧನೆಯೊಂದಿಗೆ ಸಮೀಕರಿಸಿ ವಿದ್ಯಾರ್ಥಿ ಶಿಕ್ಷಕರಿಗೆ ಭವಿಷ್ಯದಲ್ಲಿ ಗುರಿ ಸಾಧನೆಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀಮತಿ ಧನಲಕ್ಷಿö್ಮÃ ಜೀವನದಲ್ಲಿ ನಮ್ಮಾಸೆಯ ಗುರಿಯನ್ನು ಸೇರಬೇಕಾದರೆ ಕಠಿಣ ಶ್ರಮ, ಸ್ಪಷ್ಟತೆ, ಟೀಕೆ-ಟಿಪ್ಪಣಿಗಳಿಗೆ ಎದೆಗುಂದದೆ ತಾಳ್ಮೆಯಿಂದ ಸಾಗುವ ಮನವಿರಬೇಕು. ಇದು ಪ್ರತಿಯೊಬ್ಬರ ಆಶಯವಾಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಾಗರ್ ಸ್ವಾಗತಿಸಿದರು, ಐಶ್ವರ್ಯಲಕ್ಷಿö್ಮÃ ಅತಿಥಿಗಳನ್ನು ಪರಿಚಯಿಸಿದರು, ಗೌತಮ್ ಧನ್ಯವಾದವನ್ನಿತ್ತರು, ಲತಾಶ್ರೀ ನಿರೂಪಿಸಿದರು, ಪ್ರೇಮಾ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು.

ಸಂಗೀತವೂ ಸೇರಿದಂತೆ ಯಾವುದೇ ಪ್ರದರ್ಶನ ಕಲೆಗಳ ರಸಾಸ್ವಾದನೆಯಲ್ಲಿ ಭಾವನಾತ್ಮಕ

“ಸಂಗೀತವೂ ಸೇರಿದಂತೆ ಯಾವುದೇ ಪ್ರದರ್ಶನ ಕಲೆಗಳ ರಸಾಸ್ವಾದನೆಯಲ್ಲಿ ಭಾವನಾತ್ಮಕ ಹಾಗೂ ಬೌದ್ಧಿಕ ಎಂದು ಎರಡು ಬಗೆ.ಕಲೆಗಳ ವ್ಯಾಕರಣ ತಿಳಿಯದೆ ರಸಾಸ್ವಾದನೆ ಸಹಜವಾಗಿ ಹೃದಯಪೂರ್ವಕವಾಗಿ ನಡೆದರೆ  ಅದು ಭಾವನಾತ್ಮಕ;ಬೌದ್ಧಿಕ ರಸಗ್ರಹಣವು ಭಾವನೆಗಳ ಜತೆಗೆ ಕಲೆಯ ಸೌಂದರ್ಯಕ್ಕೆ ಕಾರಣವಾಗುವ ಅಂಶಗಳನ್ನು ಗ್ರಹಿಸುವ ಮಾರ್ಗವಾಗಿದೆ.ಇದು ‘ ಸಂಸ್ಕಾರಭರಿತ’ ಸಹೃದಯನ ಉದಯಕ್ಕೆ ಮತ್ತು  ಎಚ್ಚರದ ರಸಪ್ರಶಂಸೆಗೆ ಕಾರಣವಾಗುತ್ತದೆ.” ಎಂದು  ಕಲಾವಿದೆ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಶೋಧನ ವಿದ್ಯಾರ್ಥಿ ಕುಮಾರಿ ಶ್ರಾವ್ಯಾ ಬಾಸ್ರಿ ಈ ಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಲಾದ ಸಂಗೀತ ರಸಗ್ರಹಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಈ ಮಾತುಗಳನ್ನು ಆಡಿದರು.ನಮ್ಮ ನಡುವಿನ,ನಮ್ಮೊಳಗಿನ ಸಂಗೀತದಲ್ಲಿ ಶ್ರುತಿ,ಲಯ,ರಾಗ,ತಾಳ,ಭಾವ ಇತ್ಯಾದಿಗಳ ಸಜೀವ ಸಂಬಂಧವನ್ನು ಶ್ರಾವ್ಯ ಬಾಸ್ರಿ  ಪ್ರಾತ್ಯಕ್ಷಿಕವಾಗಿ  ಮಾಡಿ ತೋರಿಸಿದರಲ್ಲದೆ ವಿವಿಧ ಬಗೆಯ ಗೀತೆಗಳನ್ನು ವಿದ್ಯಾರ್ಥಿ ಶಿಕ್ಷಕರಿಂದ  ಹಾಡಿಸಿದರು. ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದರು. ಡಾ ಮಹಾಬಲೇಶ್ವರ ರಾವ್ ಸ್ವಾಗತ ಕೋರಿ ಶ್ರಾವ್ಯಾ ಅವರನ್ನು ಪರಿಚಯಿಸಿದರೆ ಕು.ನಿರುತಾ ಭಟ್ ಸ್ಮರಣಿಕೆ ನೀಡಿದರು.ಕು .ಭವ್ಯ ಕಿಣಿ ಧನ್ಯವಾದ ಸಮರ್ಪಣೆ ಮಾಡಿದರು. 

ನಿರಂತರ ಅಧ್ಯಯನದಿಂದ ಭಾಷಾಜ್ಞಾನ ಹೆಚ್ಚುತ್ತದೆ

ಮೇ.19:  ಡಾ.ಟಿ.ಎಂ.ಎ.ಪೈ  ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಭಾಷಾ ಬೋಧನಶಾಸ್ತ್ರ ವಿಭಾಗದ ವಿದ್ಯಾರ್ಥಿ ಶಿಕ್ಷಕರು ಆಯೋಜಿಸಿದ್ದ ಕಾರ್ಯಕ್ರಮವು ಡಾ: ಮಹಾಬಲೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

 ಭಾಷೆ ಮತ್ತು ಸಾಹಿತ್ಯ ಎಂಬ ಪರಿಕಲ್ಪನೆಯನ್ನು ಒಳಗೊಂಡ ಈ ಕಾರ್ಯಕ್ರಮದ  ಆಧ್ಯಕ್ಷರಾದ ಡಾ: ಮಹಾಬಲೇಶ್ವರ ರಾವ್ “ಯಾವುದೇ ಭಾಷೆಯನ್ನು ಬೋಧನೆ ಮಾಡುವವರು ಚಿಂತನೆ, ಆಲಿಸುವಿಕೆ, ಮಾತು, ಓದು ಮತ್ತು ಬರಹ ಈ ಐದು ಕೌಶಲಗಳಲ್ಲಿ ಪಾರಂಗತರಾಗಬೇಕು. ಹಾಗೆ ಆದಾಗಲೆ ಅವರು ಪರಿಣತ ಭಾಷಾ ಶಿಕ್ಷಕರಾಗಲು ಸಾಧ್ಯ. ಇದಕ್ಕೆ ಸತತವಾದ ಅಧ್ಯಯನ, ಅವಲೋಕನ ಮತ್ತು ಪರಿಶ್ರಮ ಅವಶ್ಯಕ. ಭಾಷಾ ಶಿಕ್ಷಕರಾಗಲಿರುವ  ವಿದ್ಯಾರ್ಥಿ ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕು” ಎಂದು ನುಡಿದರು.

    ವಿದ್ಯಾರ್ಥಿ ಶಿಕ್ಷಕರು ಪ್ರಬಂಧ ಮಂಡನೆ, ಕಿರುಪ್ರಹಸನ, ಚರ್ಚೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಕ್ಯಾರೊಲ್ ಮೊನಿಶಾ ಸ್ವಾಗತಿಸಿದರು. ಅಂಜುಮ್ ಧನ್ಯವಾದವನ್ನಿತ್ತರು. ಅನಿಶಾ ಕಾರ್ಯಕ್ರಮ ನಿರ್ವಹಿಸಿದರು.

ನಾನೇಕೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡೆ?

“ಆಧುನಿಕೋತ್ತರ ಯುಗದ ಶಿಕ್ಷಕರು ನಿರಂತರ ಬದಲಾಗುತ್ತಿರುವ,ಬೆಳೆಯುತ್ತಿರುವ ತಂತ್ರಜ್ಞಾನದ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ.ತಂತ್ರಜ್ಞಾನಕ್ಕೆ ಬಲಿಯಾಗದೆ ಅದನ್ನು ಕಲಿಕೆಯ ಅಗತ್ಯಗಳಿಗೆ ತಕ್ಕಂತೆ ಒಲಿಸಿಕೊಳ್ಳಬೇಕಾಗಿದೆ.ಸಂವಹನದ ಮರ್ಮವನ್ನು ಅರಿಯಬೇಕಾಗಿದೆ” ಎಂದು ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ
ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ನುಡಿದರು.ಅವರು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ ನಾನೇಕೆ ಶಿಕ್ಷಕ
ವೃತ್ತಿಯನ್ನು ಆಯ್ದುಕೊಂಡೆ?’ ಎಂಬ ಅಭಿಪ್ರಾಯ ವಿನಿಮಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡುತ್ತಿದ್ದರು.ವಿದ್ಯಾರ್ಥಿ – ಶಿಕ್ಷಕರಾದ ತನ್ವಿ ವಿಶಿಷ್ಟ ಹೇಮಂತ್,ಸಬೀನಾ,ರಮ್ಯ.ಜೆ,ಕಿರಣ್ ಕುಮಾರ್ ಮತ್ತು
ಪರಶು.ಡಿ.ಎಂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಶಾ ಫೆರ್ನಾಂಡಿಸ್ ಸ್ವಾಗತ ಕೋರಿದರೆ ದೀಪ್ತಿ ವಸಂತ್
ಧನ್ಯವಾದ ಸಲ್ಲಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಶಿಕ್ಷಣ ಕಾಲೇಜಿನಲ್ಲಿ 'ಜನಶತ್ರು' ನಾಟಕ ಪ್ರದರ್ಶನ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ತುಮರಿಯ ‘ ಕಿನ್ನರ ಮೇಳ’ದವರಿಂದ ‘ಜನಶತ್ರು’ ಎಂಬ ನಾಟಕ ಪ್ರದರ್ಶಿತಗೊಂಡಿತು. ಆಧುನಿಕ ರಂಗಭೂಮಿಯ ಹರಿಕಾರನೂ ವಾಸ್ತವವಾದದ ಪಿತಾಮಹನೂ ಆದ ಹೆನ್ರಿಕ್ ಇಬ್ಸನ್ ವಿರಚಿತ ‘ ಆ್ಯನ್ ಎನಿಮಿ ಆಫ್ ದ ಪೀಪಲ್ ‘ ನಾಟಕವನ್ನು ಆಧರಿಸಿದ ಈ ಕನ್ನಡ ನಾಟಕವನ್ನು ರಚಿಸಿ ನಿರ್ದೇಶನ ಮಾಡಿದವರು ಎಸ್.ಸುರೇಂದ್ರನಾಥ್.ಕೇವಲ ಐದೇ ಪಾತ್ರಗಳಿರುವ,ಸರಳ ರಂಗಸಜ್ಜಿಕೆಯ,ತೆಳುವಾದ ಕಥಾಹಂದರದ ಈ ನಾಟಕ ದುಡ್ಡಿನ ಅಹಂಕಾರಕ್ಕೆ ಬಿಕರಿಯಾದ ಬಹುಮತ ಹಾಗೂ ಬಹುಮತವಾದದ ವಿರುದ್ಧ ವ್ಯಕ್ತಿ ಒಂಟಿಯಾದರೂ ಸರಿ ತಾನು ಕಂಡ ಸತ್ಯದ ಪ್ರತಿಪಾದನೆ ಮಾಡಲೇಬೇಕು; ಒಂಟಿ ದನಿ ದುರ್ಬಲ ದನಿಯಲ್ಲ ಎಂಬುದನ್ನು ನಿರೂಪಿಸಲೇಬೇಕು ಎಂಬ ಪ್ರಬಲಸಂದೇಶವನ್ನು ನೀಡುತ್ತದೆ ಎಂದು ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ನುಡಿದು ಕಿನ್ನರ ಮೇಳ, ತುಮರಿ ಮಕ್ಕಳ ರಂಗಭೂಮಿಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿ ಸ್ವಾಗತ ಕೋರಿದರು.ವಿದ್ಯಾರ್ಥಿ ಶಿಕ್ಷಕರಿಗೆ ಇದೊಂದು ಅನನ್ಯ ಅನುಭವವಾಗಿತ್ತು.

ಬಿಎಡ್ ವ್ಯಾಸಂಗ ಕ್ರಮ ಪರಿಚಯ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನೂತನ ವಿದ್ಯಾರ್ಥಿ ಶಿಕ್ಷಕರಿಗಾಗಿ ಒಂದು ದಿನದ
ವ್ಯಾಸಂಗಕ್ರಮ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಾಲೇಜಿನ ಸಂಸ್ಥಾಪಕರಾದ ದಿ ಮಾಧವ ಪೈ ಯವರ ದೂರದರ್ಶಿತ್ವ,ಕನಸುಗಾರಿಕೆ,ಕ್ರತು ಶಕ್ತಿ ಹಾಗೂ ದಣಿವರಿಯದ ದುಡಿಮೆಯಿಂದಾಗಿ ಅಖಂಡ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ ಎಂದರಲ್ಲದೆ ಕಾಲೇಜಿನ ಇತಿಹಾಸ ಹಾಗೂ ಪರಂಪರೆಯನ್ನು ಕುರಿತು ಹೆಚ್ಚಿನ ಬೆಳಕು ಚೆಲ್ಲಿದರು.ಬಳಿಕ ಉಪನ್ಯಾಸಕಿಯರಾದ ಧನಲಕ್ಷ್ಮಿ,ಪ್ರೀತಿ ಎಸ್ ರಾವ್,ಉಷಾ ಎಚ್,ರೂಪಾ ಕೆ ,ಮಮತಾ ಸಾಮಂತ್ ಮತ್ತು ಗ್ರಂಥಪಾಲಕ ವಿಜಯಕುಮಾರ್ ಬಿಎಡ್ ಅಧ್ಯಯನದ ವಿವಿಧ ಅಂಗಗಳನ್ನು ಪರಿಚಯಿಸಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾರ್ಥನೆ,ಶಿಸ್ತು, ಸಮವಸ್ತ್ರ ಹಾಗು ಸಹಪಠ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿ ಶಿಕ್ಷಕರಿಗೆ ಸೂಕ್ತ ಮಾಹಿತಿ ಒದಗಿಸಲಾಯಿತು.

Older news and events

ಕುಮಾರಿ ಅನುಷಾ ಎಸ್ ಶೆಟ್ಟಿ ಪ್ರಥಮ ರಾಂಕ್

ಮಂಗಳೂರು ವಿಶ್ವವಿದ್ಯಾನಿಲಯ ೨೦೨೦ ಫೆಬ್ರುವರಿಯಲ್ಲಿ ನಡೆಸಿದ ಬಿಎಡ್ ಪದವಿ ಪರೀಕ್ಷೆಯಲ್ಲಿ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಕುಮಾರಿ ಅನುಷಾ ಎಸ್ ಶೆಟ್ಟಿ ಪ್ರಥಮ ರಾಂಕ್ ಗಳಿಸಿದ್ದಾರೆ.ಹತ್ತು ವರ್ಷಗಳ ಬಳಿಕ ಕಾಲೇಜಿನ ವಿದ್ಯಾರ್ಥಿಯೋರ್ವರ ಈ ಸರ್ವಶ್ರೇಷ್ಠ ಸಾಧನೆಗೆ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಅಭಿನಂದನೆ ಸಲ್ಲಿಸಿದ್ದಾರಲ್ಲದೆ ಅಧ್ಯಾಪಕ ವೃಂದದ ದುಡಿಮೆಯನ್ನು ಶ್ಲಾಘಿಸಿದ್ದಾರೆ.ಕುಮಾರಿ ಅನುಷಾ ಉದಯೋನ್ಮುಖ ಬರಹಗಾರ್ತಿಯಾಗಿದ್ದು ಇವರ ಕೆಲವು ಲೇಖನಗಳು ‘ಉದಯವಾಣಿ’ ಪತ್ರಿಕೆಯ ‘ಯುವ ಸಂಪದ’ ವಿಭಾಗದಲ್ಲಿ ಬೆಳಕು ಕಂಡಿವ.

“ಶಿಕ್ಷಕರು ಸಾಂಸ್ಕೃತಿಕ ವರ್ಗಾವಣೆಯ ನೇತಾರರು “

“ಯಾರು ಬೇಕಾದರೂ ಮಾಮೂಲಿ ತರಗತಿ ಶಿಕ್ಷಕರಾಗಬಹುದು.ಆದರೆ ಪ್ರತಿಭಾಸಂಪನ್ನರಾಗಿ ತಮ್ಮ ಪ್ರತಿಭೆಯನ್ನು ತರಗತಿಗಳಲ್ಲಿ ಸಮರ್ಥವಾಗಿ ದುಡಿಸಿಕೊಳ್ಳುವ,ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಶಿಕ್ಷಕರಾಗುವುದು ಸುಲಭವಲ್ಲ. ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಸಾಂಸ್ಕೃತಿಕ ವರ್ಗಾವಣೆಯ ನೇತಾರರಾಗಬೇಕು” ಎಂದು ಉಡುಪಿಯ ಡಾ ಟಿ ಎಂ J ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ನುಡಿದರು.ಅವರು ಕಾಲೇಜಿನಲ್ಲಿ ಎರಡನೆಯ ಸೆಮಿಸ್ಟರ್ ವಿದ್ಯಾರ್ಥಿ- ಶಿಕ್ಷಕರು ಹಮ್ಮಿಕೊಂಡ ‘ಪ್ರತಿಭಾ ಪ್ರದರ್ಶನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಮೂಹಗಾನ,ದೇಶಭಕ್ತಿ ಗೀತಗಾಯನ,ಭಾವಗೀತೆ,ವಿವಿಧ ಬಗೆಯ ನೃತ್ಯಗಳು,ಗಾನ- ಚಿತ್ರ ಹಾಗೂ ಕಿರು ಪ್ರಹಸನವನ್ನು ಪ್ರಸ್ತುತ ಪಡಿಸಿದರು.ಜಾಯ್ಸನ್ ಕಬ್ರಾಲ್ ಸ್ವಾಗತ ಕೋರಿದರೆ ಪ್ರತಿಮಾ.ಜಿ ಧನ್ಯವಾದ ಸಮರ್ಪಿಸಿದರು. ಎಲ್ಸಿ ಸವಿತಾ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಬೋಧನಾಭ್ಯಾಸದ ಮೆಲುಕು ನೋಟ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಎರಡನೆಯ ಸೆಮಿಸ್ಟರ್ ನ ವಿದ್ಯಾರ್ಥಿ ಶಿಕ್ಷಕರು ಉಡುಪಿ ತಾಲೂಕಿನ ಆಯ್ದ ಪ್ರೌಢಶಾಲೆಗಳಲ್ಲಿ ಐದು ವಾರಗಳ ಬೋಧನಾಭ್ಯಾಸ ಮುಗಿಸಿದ್ದು ಪಡೆದ ಅನುಭವಗಳನ್ನು ಮೆಲುಕು ಹಾಕುವ ಕಾರ್ಯಕ್ರಮವನ್ನು ಈಚೆಗೆ ಕಾಲೇಜಿನ ‘ಮಾಧವ ಮಂದಿರ’ದಲ್ಲಿ ಏರ್ಪಡಿಸಲಾಗಿತ್ತು. ಒಂಬತ್ತು ತಂಡಗಳ ಪ್ರತಿನಿಧಿಗಳಾದಪ್ರತಿಭಾ,ಸೌಮ್ಯಶ್ರೀ,ಪದ್ಮಿನಿ,ಜಾಯ್ಸನ್ ಕಬ್ರಾಲ್,ಪವಿತ್ರಾ,ಜಿ.ಸುದರ್ಶನ,ಸ್ನೇಹಾ ಕಿಣಿ,ವೈಷ್ಣವಿ ಹಾಗೂ ಆಶ್ರಿತಾ ಶೆಟ್ಟಿ ಮಾತನಾಡಿ ಬೋಧನಾಭ್ಯಾಸ ಆತ್ಮಾವಲೋಕನಕ್ಕೆ ಹಾದಿ ಮಾಡಿಕೊಟ್ಟಿತು, ನಮ್ಮ ಇತಿಮಿತಿಗಳನ್ನು ಕಂಡುಕೊಳ್ಳಲು ಸಹಾಯಕವಾಯಿತು, ತರಗತಿಗಳಲ್ಲಿ ಕಲಿತ ತಾತ್ವಿಕ ವಿಚಾರಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಕಲಿಯಲು ಸಾಧ್ಯವಾಯಿತು ಎಂದು ನುಡಿದರಲ್ಲದೆ ಸತತವಾಗಿ ತಿದ್ದಿ ತೀಡಿ ಮಾರ್ಗದರ್ಶನ ಮಾಡಿದ ಪ್ರಾಧ್ಯಾಪಕ ವೃಂದದ ಸೇವೆಯನ್ನು ಅಭಿಮಾನದಿಂದ ಸ್ಮರಿಸಿಕೊಂಡರು.ಬೋಧನಾಭ್ಯಾಸದುದ್ದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ ಕಾಲೇಜಿನ ಸಮನ್ವಯಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಪ್ರಾಧ್ಯಾಪಕರ ಪರವಾಗಿ ಶ್ರೀ ಮತಿ ರೂಪ ಹಾಗೂ ಮಮತಾ ಸಾಮಂತ್ ಮಾತನಾಡಿ ಮಾಡಿದ ಸಾಧನೆಯನ್ನು ಮೆಚ್ಚಿ ಸುಧಾರಣೆಯಾಗಬೇಕಾದ ಅಂಶಗಳ ಮೇಲೆ ಬೆಳಕು ಚೆಲ್ಲಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡುತ್ತ ಶಿಕ್ಷಕರು ಚಿಂತನಶೀಲರಾಗಬೇಕು,ತಮ್ಮನ್ನು ವಿದ್ಯಾರ್ಥಿಗಳ ಸ್ಥಾನದಲ್ಲಿ ಕಲ್ಪಿಸಿಕೊಂಡು ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ವ್ಯಾಪಕವಾದ ಅಧ್ಯನಶೀಲತೆ ಮತ್ತು ಬಹುಶ್ರುತತ್ವವನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರು.ಕೊನೆಯಲ್ಲಿ ಪಲ್ಲವಿ.ಎಂ ಧನ್ಯವಾದ ಸಲ್ಲಿಸಿದರೆ ಆರಂಭದಲ್ಲಿ ಯೂನಿಸ್ ಆಶ್ಲಿನ್ ಸರ್ವರನ್ನೂ ಸ್ವಾಗತಿಸಿದರು .ಆ್ಯನೆಟ್ ಶ್ರೇಯಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಶ್ರೀಮತಿ ಪ್ರಿಯಾ ಪ್ರಭು ಇವರು ಎರಡನೆ ರಾಂಕ್

ಮಂಗಳೂರು ವಿಶ್ವವಿದ್ಯಾನಿಲಯವು ಜನವರಿ ೨೦೧೯ರಲ್ಲಿ ನಡೆಸಿದ ಎರಡು ವರ್ಷಗಳ ಬಿ.ಎಡ್ ಪದವಿ ಪರೀಕ್ಷೆಯಲ್ಲಿ ಉಡುಪಿಯ ಡಾ: ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನ ಶ್ರೀಮತಿ ಪ್ರಿಯಾ ಪ್ರಭು ಇವರು ಎರಡನೆರ‍್ಯಾಂಕನ್ನು ಗಳಿಸಿರುತ್ತಾರೆ.

ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಅವರ ಸಾಧನೆಗಾಗಿ ಅಭಿನಂದಿಸಿರುತ್ತಾರೆ.

ಪ್ರತಿಯೊಬ್ಬರೂ ಪರಿಸರ ಸ್ನೇಹಿಗಳಾಗಬೇಕು

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ತೃತೀಯ ಸೆಮೆಸ್ಟರ್‌ನ ಜೀವಶಾಸ್ತ್ರ ವಿಷಯ ವಿಭಾಗದ ವಿದ್ಯಾರ್ಥಿ ಶಿಕ್ಷಕರಿಂದ ‘ಪರಿಸರ ಸ್ನೇಹಿ ಜೀವನ ಶೈಲಿ’ ಎಂಬ ಪರಿಕಲ್ಪನೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಧನಲಕ್ಷ್ಮೀಯವರು ‘ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ಸ್ವಾತಂತ್ರ್ಯವಿದೆಯೆಂದು ಭಾವಿಸದೆ ಜವಾಬ್ದಾರಿಯುತವಾಗಿ ಸಂಪನ್ಮೂಲಗಳನ್ನು ಕಡಿಮೆ ಬಳಸಿ, ಪುರ್ನಬಳಕೆ ಮಾಡುವಂತಹ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಪರಿಸರ ಸ್ನೇಹಿಗಳಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶಿಕ್ಷಕರಿಂದ ಪ್ರಬಂಧ ಮಂಡ, ಕಿರು ಪ್ರಹಸನ, ನೃತ್ಯ, ಗಾಯನಗಳು ಪ್ರಸ್ತುತಗೊಂಡವು.

ಕಾಲೇಜಿನ ವಿದ್ಯಾರ್ಥಿ ಶಿಕ್ಷಕರಾದ ರೆನಿಟಾ ರೋಡ್ರಿಗಸ್ ಸ್ವಾಗತಿಸಿದರು. ಆಶಾ ಧನ್ಯವಾದವನ್ನಿತ್ತರು. ಸಂದೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ: iಹಾಬಲೇಶ್ವರ ರಾವ್ ಅವರ ಹಿರಿತನದಲ್ಲಿ ಈ ಕಾರ‍್ಯಕ್ರಮ ನೆರವೇರಿತು.

ಭಾರತ ಶ್ರವಣ ಕಾರ‍್ಯಕ್ರಮ

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ಖ್ಯಾತ ಗಾಯಕ ಶ್ರೀ ಎಚ್. ಚಂದ್ರಶೇಖರ ಕೆದ್ಲಾಯ ಅವರಿಂದ ಗಮಕ ಕಾರ‍್ಯಕ್ರಮ ನೆರವೇರಿತು. ಕುಮಾರ ವ್ಯಾಸಭಾರತದ ಉದ್ಯೋಗಪರ್ವದ ಹತ್ತನೆಯ ಸಂಧಿಯಿಂದ ಆಯ್ದ ಕೃಷ್ಣ-ಕರ್ಣರ ಭೇಟಿ ಹಾಗೂ ಕರ್ಣನ ಜನ್ಮರಹಸ್ಯ ಭೇದನದ ಭಾಗವನ್ನು ಗಮಕಿ ಶ್ರೀ. ಕೆದ್ಲಾಯ ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ: iಹಾಬಲೇಶ್ವರ ರಾವ್ ಆಯ್ದ ಪದ್ಯ ಭಾಗಗಳ ವ್ಯಾಖ್ಯಾನ ಮಾಡುತ್ತಾ ಕೃಷ್ಣನ ಭೇದೋಪಾಯ, ಕರ್ಣನ ಚಿತ್ತಗ್ಲಾನಿ ಹಾಗೂ ಸ್ವಾಮಿನಿಷ್ಠೆಯನ್ನು ವ್ಯಾಖ್ಯಾನಿಸಿ ಕವಿ ಕುಮಾರವ್ಯಾಸನ ಹಿರಿಮೆ ಗರಿಮೆಗಳ ಮೇಲೆ ಬೆಳಕು ಚೆಲ್ಲಿ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ ಬಿರುದು ಆತನಿಗೆ ಹೇಗೆ ಅನ್ವರ್ಥಕವಾಗಿದೆ ಎಂಬುದನ್ನು ವಿವರಿಸಿದರು.

ಕವಿಯ ಗೀತೆ ಹಾಡುವವರ ಗೀತೆ ಆಗಬೇಕು -ಸಂಗೀತಾ ಬಾಲಚಂದ್ರ

ಉಡುಪಿಯ ಡಾ: ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನಲ್ಲಿ ತೃತೀಯ ಸೆಮೆಸ್ಟರ್‌ನ ವಿದ್ಯಾರ್ಥಿ ಶಿಕ್ಷಕರಿಗಾಗಿ ಈಚೆಗೆ ಖ್ಯಾತ ಗಾಯಕಿ ಶ್ರೀಮತಿ ಸಂಗೀತಾ ಬಾಲಚಂದ್ರ ಅವರು ‘ಸಂಗೀತ ರಸಗ್ರಹಣ’ ಕಾರ‍್ಯಕ್ರಮ ನಡೆಸಿಕೊಟ್ಟರು. ಆರಂಭದಲ್ಲಿ ಶ್ರೀಮತಿ ಸಂಗೀತಾ ಬಾಲಚಂದ್ರ “ಕವಿಯ ಗೀತೆ ಗಾಯಕರ ಗೀತೆ ಆಗಬೇಕು, ಗಾಯಕರು ಗೀತೆಗಳನ್ನು ಸ್ವತ: ಅನುಭವಿಸಿ ತಮ್ಮದನ್ನಾಗಿ ಮಾಡಿಕೊಂಡಾಗ ಅದು ಗಾಯಕರ ಹಾಡಾಗುತ್ತದೆ. “ಮಾಡುವವನದಲ್ಲ ಹಾಡು, ಹಾಡುವವನದ್ದು “ ಎಂಬ ಕವಿವಾಣಿ

ಯನ್ನು ಅರಿತು ಕವಿತೆಯ ಮರ್ಮವನ್ನು ಅರಿತು ಹಾಡಬೇಕು. ಎಲ್ಲ ಕವಿತೆಗಳನ್ನು ಹಾಡಲಾಗುವುದಿಲ್ಲ. ಹಾಡಿಗೆ ಒಗ್ಗುವ ಗೀತೆಗಳನ್ನು ಹಾಡಬೇಕು. “ಓದು ಕವನಗಳನ್ನು ಲಯಬದ್ಧವಾಗಿ ಭಾವಪೂರ್ಣವಾಗಿ ಓದಬೇಕು” ಎಂದು ನುಡಿದರು. ಕುವೆಂಪು, ಕೆಎಸ್‌ನ, ಬಿ.ಆರ್.ಲಕ್ಷ್ಮಣರಾವ್, ಅಡಿಗ, ಎಚ್.ಎಸ್.ವೆಂಕಟೇಶ್ ಮೂರ್ತಿ ಮೊದಲಾದ ಕವಿಗಳ ಕವಿತೆಗಳನ್ನು ಹಾಡುವ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ; ಮಹಾಬಲೇಶ್ವರ ರಾವ್ ಶ್ರೀಮತಿ ಸಂಗೀತಾ ಅವರನ್ನು ಸಭೆಗೆ ಪರಿಚಯಿಸಿ ಸ್ಮರಣಿಕೆ ನೀಡಿದರಲ್ಲದೆ ಕಾರ‍್ಯಕ್ರಮದ ಉದ್ದೇಶಗಳನ್ನು ಮನವರಿಕೆ ಮಾಡಿಕೊಟ್ಟರು.

“ಸರ್ವಧರ್ಮ ಸಮಭಾವವೆಂದರೆ ಮತೀಯ ಸಾಮರಸ್ಯವಲ್ಲ”  -ಡಾ: ನಂದನ್ ಪ್ರಭು

“ಸತ್ಯಾನ್ವೇಷಣೆ, ಆತ್ಮಾನ್ವೇಷಣೆ, ಆತ್ಮ ಪರಿಶುದ್ಧಿ ಮತ್ತು ವರ್ತನೆಯ ಪರಿವರ್ತನೆ ಗಾಂಧೀಜಿಯವರ ಧರ್ಮದ ಪರಿಕಲ್ಪನೆಯಾಗಿತ್ತು. ಮತಗಳನ್ನು ಮೀರಿದ ಆಧ್ಯಾತ್ಮಿಕತೆಯೇ ಅವರ ಬಾಳಿನ ಆಧಾರ. ಗಾಂಧೀಜಿಯವರ ಸರ್ವಧರ್ಮ ಸಮಭಾವದ ಪರಿಕಲ್ಪನೆಗೆ ಸಾಮಾಜಿಕ ಹಾಗೂ ರಾಜಕೀಯ ಪ್ರಸ್ತುತತೆ ಇದೆ. ಅವರ ಸರ್ವಧರ್ಮ ಸಮಭಾವವೆಂಬುದು ಮತೀಯ ಸಾಮರಸ್ಯವಲ್ಲ, ಸೆಕ್ಯುಲರ್ ಅಥವಾ ಮತನಿರಪೇಕ್ಷತೆಯೂ ಅಲ್ಲ; ಅದು ಅಂತರಂಗದ ಆಧ್ಯಾತ್ಮಿಕ ಬೆಳಕು” ಎಂದು ಮಣಿಪಾಲ ನಿರ್ವಹಣ ಸಂಸ್ಥೆಯ ಪ್ರಾಧ್ಯಾಪಕ –ಚಿಂತಕ ಡಾ: ನಂದನ್ ಪ್ರಭು ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ನೆರವೇರಿದ ‘ಗಾಂಧಿ ಸಂಸ್ಮರಣೆ’ ಕಾರ‍್ಯಕ್ರಮದಲ್ಲಿ ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ: ಮಹಾಬಲೇಶ್ವರ ರಾವ್ “ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರ ಬದುಕಿನ ಚಾಲಕ ಶಕ್ತಿಗಳು. ಅವರ ಬದುಕೊಂದು ಆಧ್ಯಾತ್ಮಿಕ ಪಯಣ. ಗಾಂಧಿಯವರ ರಾಮ ಬಿಲ್ಲಿಗೆ ಹೆದೆಏರಿಸಿ ನಿಂತ ರಾಮನಲ್ಲ; ಅವರ ರಾಮ ‘ಕಲ್ಯಾಣ ರಾಮ’, ಕರುಣಾ ಸಿಂಧು. ‘ಸನಾತನ ಹಿಂದೂ’ ಎಂದು ತಮ್ಮನ್ನು ತಾವು ಕರೆದುಕೊಂಡ ಗಾಂಧಿ ತಾವೊಬ್ಬ ಉತ್ತಮ ಮುಸಲ್ಮಾನ, ಉತ್ತಮ ಕ್ರಿಶ್ಚಿಯನ್ ಎಂದೂ ಅಭಿಪ್ರಾಯ ಹೊಂದಿದ್ದರು” ಎಂದು ನುಡಿದರಲ್ಲದೆ ಗಾಂಧಿಯವರಿಗೆ ಪ್ರಿಯವಾದ ನಾರಸಿಂಹ ಮೆಹ್ತ್ತಾ ಅವರ ಗುಜರಾತಿ ಕೀರ್ತನೆ ‘ವೈಷ್ಣವ ಜನತೋ” ದ ಕನ್ನಡ ಅನುವಾದ “ಎಲ್ಲರ ನೋವನು” ಕವಿತೆಯನ್ನೂ ಸತ್ಯನಾರಾಯಣ ರಾವ್ ಅಣತಿಯವರ ‘ಬಾಪು ನೆನಪಲ್ಲಿ’ ಎಂಬ ಕವಿತೆಯನ್ನೂ ವಾಚನ ಮಾಡಿದರು. ವಿದ್ಯಾರ್ಥಿ ಶಿಕ್ಷಕರಾದ ಗಣೇಶ ಹಡಪದ ಸ್ವಾಗತಿಸಿದರೆ ರೇಷ್ಮಾ ಬಿ. ಆಭಾರ ಮನ್ನಿಸಿದರು. ದೀಕ್ಷಲ್ ಮರಿಯಾ ಪಿರೇರಾ ಅಭ್ಯಾಗತರನ್ನು ಪರಿಚಯಿಸಿದರೆ ಶಿಲ್ಪ ಶೆಟ್ಟಿಗಾರ್ ಕಾರ‍್ಯಕ್ರಮ ನಿರೂಪಿಸಿದರು. ನಮ್ರತಾ ಪೈ ಮತ್ತು ಬಳಗ ಹಾಗೂ ಪಲ್ಲವಿ ಬಿ. ಮತ್ತು ತಂಡದವರು ‘ವೈಷ್ಣವ ಜನತೋ’ ಹಾಗೂ ರಾಮಧುನ್ ಅನ್ನು ಹಾಡಿದರು.

“ ಇತಿಹಾಸವನ್ನು ತಿದ್ದುವ ಅತಿರೇಕ ಅಪಾಯಕರ ” – ಡಾ: ಮಹಾಬಲೇಶ್ವರ ರಾವ್

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮೂರನೆಯ ಸೆಮೆಸ್ಟರ್‌ನ ಕನ್ನಡ ಬೋಧನ ವಿದ್ಯಾರ್ಥಿ ಶಿಕ್ಷಕರು ಅರ್ಥಪೂರ್ಣವಾದ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕರ್ನಾಟಕ ಏಕೀಕರಣ ಹಾಗೂ ಕನ್ನಡ ರಾಜ್ಯೋತ್ಸವದ ಮಹತ್ತ್ವದ ಬಗ್ಗೆ ಕುಮಾರಿ ಅನ್ನಪೂರ್ಣ, ಕುಮಾರಿ ಶಕೀಲಾ ಕಿರು ಭಾಷಣಗಳನ್ನು ಮಾಡಿದರು. ಕುಮಾರಿ. ಜ್ಯೋತಿ ಮತ್ತು ಬಳಗದವರು ‘ಹಚ್ಚೇವು ಕನ್ನಡದ ದೀಪ’ ಹಾಡನ್ನು ಹಾಡಿದರು. ‘ಕನ್ನಡದ ಮಹತ್ತ್ವದ ಬಗ್ಗೆ ‘ಥಟ್ ಅಂತ ಹೇಳಿ’ ಕಾರ‍್ಯಕ್ರಮವನ್ನು ಕುಮಾರಿ ತೇಜಶ್ರೀ ನಡೆಸಿಕೊಟ್ಟರು. ‘ಯಾರು ನಿಜವಾದ ಕನ್ನಡಿಗ?’ ಎಂಬ ಕಿರು ರೂಪಕವನ್ನು ಗಣೇಶ್ ಮತ್ತು ತಂಡದವರು ಅಭಿನಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಇಂದು ಶಾಲೆಗಳಲ್ಲಿ ಕನ್ನಡ ಭಾಷಾ ಮಾಧ್ಯಮಕ್ಕೆ ಎದುರಾಗಿರುವ ಗಂಡಾಂತರ, ಇಂಗ್ಲಿಷಿನ ಬಲದಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಉಳಿಸುವ ಹುಚ್ಚು ಸಾಹಸ ಮತ್ತು ಶಾಲೆ ಕಾಲೇಜುಗಳ ಪಠ್ಯ ಕ್ರಮಗಳಿಂದ ಹೈದರ್ ಅಲಿ ಹಾಗೂ ಟಿಪ್ಪು ಸುಲ್ತಾನನ ಬಗೆಗಿನ ಪಾಠಗಳನ್ನು ಕಿತ್ತು ತೆಗೆದು ಇತಿಹಾಸವನ್ನು ತಿದ್ದುವ ಅತಿರೇಕದ ಅಪಾಯಕಾರಿ ನಿರ್ಣಯಗಳನ್ನು ಖಂಡಿಸಿದರು. ಕನ್ನಡ ಭಾಷಾ ಶಿಕ್ಷಕರಾಗುವವರು ಸಾಹಿತ್ಯ ಪ್ರೀತಿ, ವ್ಯಾಪಕವಾದ ಓದುಗಾರಿಕೆ ಹಾಗೂ ತಾಳ್ಮೆಯ ಕೇಳ್ಮೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ‍್ಯತೆಯನ್ನು ಒತ್ತಿಹೇಳಿದರು. ಕುಮಾರಿ ದೀಕ್ಷಾ ಧನ್ಯವಾದವನ್ನಿತ್ತರು. ಕುಮಾರಿ ಪಲ್ಲವಿ ಕಾರ‍್ಯಕ್ರಮ ನಿರೂಪಿಸಿದರು.

“ಆಧುನಿಕ ತಂತ್ರಜ್ಞಾನ ಯಾವುದೇ ಅರ್ಥಪೂರ್ಣ ಕಲೆಯನ್ನು ಸೃಜಿಸಲಾರದು”  – ಕೆ.ಜಿ. ಕೃಷ್ಣಮೂರ್ತಿ

“ರಂಗಭೂಮಿ ಎಂಬುದು ಅನುತ್ಪಾದಕವೂ ಮನೋರಂಜಕವೂ ಆದ ಮಾಧ್ಯಮ ಎಂಬ ತಪ್ಪು ಕಲ್ಪನೆ ಸಾರ್ವಜನಿಕರಲ್ಲಿದೆ. ಹಾಗೆ ನೋಡಿದರೆ ರಂಗಭೂಮಿಯು ಸಮಾಜಮುಖಿ ಮಾಧ್ಯಮ, ಅದು ಪ್ರಜಾಪ್ರಭುತ್ವವಾದಿ ಸಂಸ್ಥೆ ಮತ್ತು ಸರ್ವ ಸಮಾನತೆಯ ತತ್ತ್ವವನ್ನು ಸಾರುವ ಮಾಧ್ಯಮ. ರಂಗಭೂಮಿ ಮುಖ್ಯವಾಗಿ ಧಾರ್ಮಿಕ ಆಚರಣೆಗಳು ಹಾಗೂ ಶ್ರಮಿಕ ಸಂಸ್ಕೃತಿಯ ಮೂಲಕ ಮೂಡಿಬಂದ ಕಲಾ ಮಾಧ್ಯಮವಾಗಿದ್ದು ಆಂಗಿಕ, ವಾಚಿಕ, ಸಾತ್ವಿಕ ಮತ್ತು ಆಹಾರ್ಯವೆಂಬ ಅಂಗಗಳನ್ನು ಒಳಗೊಂಡಿದೆ. ಆದರೆ ಇಂದು ಅತ್ಯಾಧುನಿಕ ತಂತ್ರಜ್ಞಾನ ಯಾವುದೇ ಅರ್ಥಪೂರ್ಣ ಕಲೆಯನ್ನು ಸೃಜಿಸಲಾರದು” ಎಂದು ಖ್ಯಾತ ರಂಗನಿರ್ದೇಶಕ ಶ್ರೀ. ಕೆ.ಜಿ. ಕೃಷ್ಣಮೂರ್ತಿ ಈಚೆಗೆ ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನಲ್ಲಿ ತೃತೀಯ ಸೆಮೆಸ್ಟರ್ ವಿದ್ಯಾರ್ಥಿ ಶಿಕ್ಷಕರಿಗಾಗಿ ಏರ್ಪಡಿಸಲಾದ ರಂಗತರಬೇತಿ ಶಿಬಿರದಲ್ಲಿ ನುಡಿದರು. ಶ್ರೀ. ಕೆ.ಜಿ. ಕೃಷ್ಣಮೂರ್ತಿ ಹಾಗೂ ಶ್ರೀಮತಿ. ಸುಶೀಲ ಕೆಳಮನೆ ವಿದ್ಯಾರ್ಥಿ ಶಿಕ್ಷಕರಿಗಾಗಿ ರಂಗ ಭೂಮಿಯ ಇತಿಹಾಸ, ಪ್ರಸ್ತುತತೆ, ನಟನೆಯ ಮೂಲ ಪಾಠಗಳು, ಏಕಾಗ್ರತೆ, ಧ್ವನಿಯ ಏರಿಳಿತಗಳು ಮುಂತಾದ ರಂಗಭೂಮಿಗೆ ಸಂಬಂಧಿಸಿದ ಅಂಶಗಳನ್ನು ವಿವರಿಸಿದಲ್ಲದೆ ಸೂಕ್ತ ಪ್ರಾತ್ಯಕ್ಷಿಕೆಯನ್ನು ನೀಡಿದರು. ವೈದೇಹಿಯವರು ರಚಿಸಿದ ‘ಗಿರಿಬಾಲೆ’ ಆತ್ಮ ಚರಿತ್ರೆಯ ಕೆಲಭಾಗಗಳನ್ನು ಶ್ರೀಮತಿ. ಸುಶೀಲ ಅಭಿನಯಿಸಿ ತೋರಿಸಿದರು. ವಿದ್ಯಾರ್ಥಿ ಶಿಕ್ಷಕರಾದ ಶ್ರೀಮತಿ. ಸೌಮ್ಯ ಆಚಾರ್ಯ, ಶ್ರೀಮತಿ ಶ್ರುತಿ ಮೋಹನ ಭಂಡಾರಿ ಮತ್ತು ಕುಮಾರಿ ಶಕೀಲ ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಶ್ರೀ. ಕೆ.ಜಿ. ಕೃಷ್ಣಮೂರ್ತಿ ಹಾಗೂ ಶ್ರೀಮತಿ ಸುಶೀಲಾ ಅವರನ್ನು ಪರಿಚಯಿಸಿ ನೆನಪಿನ ಕಾಣಿಕೆ ನೀಡಿದರು. ವಿದ್ಯಾರ್ಥಿ ಶಿಕ್ಷಕ ಶ್ರೀ ಸಂದೇಶ್ ಕುಮಾರ್ ಧನ್ಯವಾದ ಸಮರ್ಪಿಸಿದರು.

“ನಮಗಿಂದು ಯೋಚಿಸುವ, ಅವಲೋಕಿಸುವ ಕಲಿಯುವ ಶಿಕ್ಷಕರು ಬೇಕು” – ಡಾ: ಮಹಾಬಲೇಶ್ವರ ರಾವ್

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ವಿದ್ಯಾರ್ಥಿ ಶಿಕ್ಷಕರಿಗಾಗಿ ಈಚೆಗೆ “ನನ್ನ ಕಲ್ಪನೆಯ ಶಿಕ್ಷಕ ವೃತ್ತಿ”ಎಂಬ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಪ್ರಥಮ ಸೆಮೆಸ್ಟರ್‌ನ ಹದಿನೈದು ಮಂದಿ ವಿದ್ಯಾರ್ಥಿ ಶಿಕ್ಷಕರು ಶಿಕ್ಷಕ ವೃತ್ತಿಯಲ್ಲಿನ ದೈವಿಕತೆ, ಒದಗುವ ಆತ್ಮ ಸಂತೃಪ್ತಿ, ಪರಿವರ್ತನೆಯ ಹಂಬಲ ಇತ್ಯಾದಿಗಳನ್ನು ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ ಶಿಕ್ಷಕ ವೃತ್ತಿ ಹೊಟ್ಟೆಪಾಡಿನ ಉದ್ಯೋಗವಲ್ಲ, ನಾವು ಈ ವೃತ್ತಿಗೆ ಆಕಸ್ಮಿಕವಾಗಿಯೋ ಅಥವಾ ಆಯ್ಕೆ ಮಾಡಿಕೊಂಡು ಬಂದಿದ್ದರೂ ವೃತ್ತಿಯನ್ನು ಪ್ರೀತಿಸಿ ವೃತ್ತಿತೃಪ್ತಿ ಕಂಡು ಕೊಳ್ಳಬೇಕು. ಈ ದೇಶಕ್ಕೆ ಇಂದು ಯೋಚಿಸುವ, ಅವಲೋಕಿಸುವ ಹಾಗೂ ಹೊಸದನ್ನು ಕಲಿಯುವ, ತರಗತಿಗಳಲ್ಲಿ ಹೊಸದನ್ನು ಆವಿಷ್ಕರಿಸುವ ಶಿಕ್ಷಕರು ಬೇಕು. ಅಂಥ ಶಿಕ್ಷಕರು ನೀವಾಗಬೇಕು” ಎಂದು ನುಡಿದರು. ಶ್ರೀಮತಿ. ಗ್ರೇಸ್ ಜಿ. ಕರೆನ್ ನಿರೂಪಿಸಿದ ಕಾರ‍್ಯಕ್ರಮದಲ್ಲಿ ಸುಚಿತ್ರಾ ಸಿ. ಎಲ್ ಸ್ವಾಗತಿಸಿದರೆ ವಸುಂಧರಾ ಆಚಾರ್ಯ ಧನ್ಯವಾದ ಸಮರ್ಪಿಸಿದರು.

ಡಾ: ಮಹಾಬಲೇಶ್ವರ ರಾವ್‌ಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ

ಬೆಂಗಳೂರಿನ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಕೊಡಮಾಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ

ಡಾ: ಮಹಾಬಲೇಶ್ವರ ರಾವ್ ಆಯ್ಕೆಯಾಗಿದ್ದು ಇದೇ ೨೫.೯.೨೦೧೯ ಬುಧವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಪ್ರಶಸ್ತಿ ವಿತರಣೆಯ ಸಮಾರಂಭ ನೆರವೇರಲಿದೆ. ಡಾ: ಮಹಾಬಲೇಶ್ವರ ರಾವ್ ಮನೋವಿಜ್ಞಾನ, ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ, ಭಾಷಾ ಶಿಕ್ಷಣ, ಶಿಕ್ಷಕರ ಶಿಕ್ಷಣ, ಅನುವಾದ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇದುವರೆಗೆ ೧೩೫ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರು ಕನ್ನಡ ಸಾಹಿತ್ಯ ಪರಿಷತ್ತಿನ ಡಾ: ಹಾ ಮಾ ನಾ ದತ್ತಿ ನಿಧಿ, ವಸುದೇವ ಭೂಪಾಲಂ ದತ್ತಿನಿಧಿ, ಡಾ: ಎಸ್ ಧರಣೇಂದ್ರಯ್ಯ ದತ್ತಿ ನಿಧಿ ಪುಸ್ತಕ ಪುರಸ್ಕಾರ, ಉಪಾಧ್ಯಾಯ ಸಂಮಾನ್ ರಾಜ್ಯ ಪುರಸ್ಕಾರ, ಗೊರೂರು ಪುರಸ್ಕಾರ ಹಾಗೂ ರೋಟರಿ ವ್ಯಕ್ತಿ ಶ್ರೇಷ್ಠತಾ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ೧೯೮೨ರಿಂದ ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಸಮನ್ವಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಗುರುವಿನ ಸೂಕ್ತ ಮಾರ್ಗದರ್ಶನ ಬದುಕಿನ ದಿಕ್ಕನ್ನು ಬದಲಿಸಬಲ್ಲದು

ಡಾ: ಟಿ. ಎಂ. ಎ. ಪೈ ಪ್ರತಿಷ್ಠಾನ ಮತ್ತು ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಸಹಯೋಗದೊಂದಿಗೆ ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ಶ್ರೀ ವಿಜಯ ಕುಮಾರ್ ಸೋನ್ಸ್ ಹಾಗೂ ಶ್ರೀಮತಿ ಸರೋಜ ಮರೀನಾ ಅವರನ್ನು ಸಂಮಾನಿಸಲಾಯಿತು.

ಸಂಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ. ಸರೋಜ ಮರೀನಾ ಅವರು ‘ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕತನ, ಶಿಸ್ತುಬದ್ಧ ಜೀವನ, ವೃತ್ತಿಗೌರವಗಳನ್ನು ರೂಢಿಸಿಕೊಂಡಾಗ ನಿಧಾನವಾಗಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ಅಂತಹ ಯಶಸ್ಸನ್ನು ತಾನು ಪಡೆಯುವಲ್ಲಿ ಸಾರ್ಥಕ ಶಿಕ್ಷಣ ನೀಡಿದ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿಗೆ ಚಿರಋಣಿ. ವಿದ್ಯಾರ್ಥಿ ಶಿಕ್ಷಕರು ಭವಿಷ್ಯದಲ್ಲಿ ಅಂತಹ ಹೆಮ್ಮೆಯ ಕಾಲೇಜಿನ ವಿದ್ಯಾರ್ಥಿಗಳಾಗಿ ಗುರುತಿಸಿಕೊಳ್ಳುವಂತಾಗಲಿ’ ಎಂದು ಆಶಿಸಿದರು.

ಕಾರ‍್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಅವರು ‘ ಓರ್ವ ಉತ್ತಮ ಗುರು ತನ್ನ ವ್ಯಕ್ತಿತ್ವ, ಪ್ರತಿಭೆ, ಪಾಂಡಿತ್ಯ ಹಾಗೂ ಆದರ್ಶ ಗುಣಗಳಿಂದ ತೀರ ಸಾಮಾನ್ಯ ವಿದ್ಯಾರ್ಥಿಯ ಬದುಕಿನ ಗತಿಯನ್ನು ಬದಲಿಸುವ ಶಕ್ತಿವಂತ’ ಎಂಬುದು ಡಾ: ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ಡಾ: ರಾಧಾಕೃಷ್ಣನ್‌ರವರ ಬದುಕಿನ ಚರಿತ್ರೆಗಳಿಂದ ತಿಳಿದು ಬರುತ್ತದೆ. ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಅನನ್ಯತೆಯನ್ನೂ ಸೂಚಿಸುತ್ತದೆ. ಅಂತಹ ಮಾದರಿ ವ್ಯಕ್ತಿಗಳ ಆದರ್ಶ, ತತ್ತ್ವಗಳು ಹಾಗೂ ಮೌಲ್ಯಗಳನ್ನು ಭಾವಿ ಶಿಕ್ಷಕರು ಅಳವಡಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಾಗ ವೃತ್ತಿಗೆ ಮಾತ್ರವಲ್ಲ ವಿದ್ಯಾ ಸಂಸ್ಥೆಗೂ ಸಾರ್ಥಕತೆ ಒದಗುತ್ತದೆ.’ ಎಂದು ಶುಭ ಹಾರೈಸಿದರು.

ಕಾರ‍್ಯಕ್ರಮದಲ್ಲಿ ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಹರೀಶ್ ಶೆಣೈ ಟ್ರಸ್ಟ್‌ನ ಉದ್ದೇಶ ಹಾಗೂ ಹಿನ್ನೆಲೆಯ ಮಾಹಿತಿ ನೀಡಿದರು.

ವಿದ್ಯಾರ್ಥಿ ಶಿಕ್ಷಕರಾದ ಶ್ರೀ ರಕ್ಷಿತ್ ಆಚಾರ್ಯ, ಕುಮರಿ ರಜನಿ ಸಾಮಗ ಮತ್ತು ಕುಮಾರಿ ಅಶ್ವಿನಿ ಶಾಸ್ತ್ರೀ ಹಾಗೂ ವೃಂದದವರು ಜಿ.ವಿ. ಅಯ್ಯರ್‌ರವರ ಗೀತೆ, ಅಲ್ಲಮನ ವಚನ ಮತ್ತು ತೈತ್ತರೀಯ ಉಪನಿಷತ್ತಿನ ಶಿಕ್ಷಾವಲ್ಲಿಯ ಶ್ಲೋಕಗಳನ್ನು ಪ್ರಸ್ತುತಪಡಿಸಿದರು. ಕುಮಾರಿ ವಿದ್ಯಾಶ್ರೀ ಕುಲಾಲ್ ಡಾ: ರಾಧಾಕೃಷ್ಣನ್ ವ್ಯಕ್ತಿತ್ವದ ಹಿರಿಮೆ ಗರಿಮೆಗಳ ಬಗ್ಗೆ ಮಾತನಾಡಿದರೆ ಕುಮಾರಿ ಅನ್ನಪೂರ್ಣ ಬಿ.ಎಂ. ಆಧುನಿಕ ಭಾರತದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಒಟ್ಟಂದದಲ್ಲಿ ಕಾರ‍್ಯಕ್ರಮವು ಶಿಕ್ಷಕ ವೃತ್ತಿಯ ಘನತೆ ಗೌರವ ಹಾಗೂ ಭಾವಿ ಶಿಕ್ಷಕರು ನಡೆಯ ಬೇಕಾದ ಹಾದಿಯ ಬಗ್ಗೆ ಬೆಳಕು ಚೆಲ್ಲುವಂತಿತ್ತು.

ಕಾಲೇಜಿನ ವಿದ್ಯಾರ್ಥಿ ಶಿಕ್ಷಕರಾದ ಶ್ರುತಿ ಮೋಹನ ಭಂಡಾರಿ ಸ್ವಾಗತಿಸಿದರು. ಶ್ರೀಮತಿ ನಮ್ರತಾ ಪೈ ಧನ್ಯವಾದವನ್ನಿತ್ತರು. ಕುಮಾರಿ ವಿಧಾತ್ರಿ ಕಾರ‍್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮಮತಾ ಸಾಮಂತ್ ಸಂಮಾನಿತರ ಪರಿಚಯ ನೀಡಿದರು.

‘ನಾವು ಕಲಿತೆವಾ?’ ಬೋಧನಾಭ್ಯಾಸ ಅನುಭವ ಕಥನ

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ದ್ವಿತೀಯ ಸೆಮೆಸ್ಟರ್‌ನ ವಿದ್ಯಾರ್ಥಿ ಶಿಕ್ಷಕರು ಜಿಲ್ಲೆಯ ವಿವಿಧ ಪ್ರೌಢ ಶಾಲೆಗಳಲ್ಲಿ ಕೈಗೊಂಡ ಬೋಧನಾಭ್ಯಾಸದ ತಮ್ಮ ಅನುಭವಗಳನ್ನು ನಿರೂಪಿಸುವ ‘ನಾವು ಕಲಿತೆವಾ?’ ಎಂಬ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ವಿಶಿಷ್ಟ ಅನುಭವಗಳನ್ನು ನಿರೂಪಿಸಿದರು. ವಿದ್ಯಾರ್ಥಿ ಶಿಕ್ಷಕರ ವಿವಿಧ ತಂಡಗಳ ನಾಯಕರುಗಳಾದ ಸೌಮ್ಯ, ನಮ್ರತಾ, ಕ್ಷಮಾ, ಚೈತ್ರಾ, ಅನ್ನಪೂರ್ಣ, ತನ್ವೀರ್ ಜಹಾನ್, ರೆನಿಟ ರೊಡ್ರಿಗಸ್ ಅವರು ಮಾತನಾಡಿ ಬೋಧನಾಭ್ಯಾಸದಿಂದ ತಮ್ಮ ಆತ್ಮವಿಶ್ವಾಸ ಗರಿಗೆದರಿತು. ತರಗತಿಯ ನಿರ್ವಹಣೆಯ ಕ್ರಮ ತಿಳಿಯಿತು. ಒಂದಿಷ್ಟು ಅಂಶಗಳನ್ನು ನಾವು ಕಲಿತೆವಾದರೂ ಇನ್ನೂ ಕಲಿಯಬೇಕಾದದ್ದಿದೆ ಎಂದು ನುಡಿದರು. ಉಪನ್ಯಾಸಕರ ಪರವಾಗಿ ಶ್ರೀಮತಿ ರೂಪಾ ಕೆ. ಹಾಗೂ ಶ್ರೀಮತಿ ಮಮತಾ ಸಾಮಂತ್ ಮಾತನಾಡಿ ವಿದ್ಯಾರ್ಥಿ ಶಿಕ್ಷಕರ ಪರಿಶ್ರಮವನ್ನು ಶ್ಲಾಘಿಸಿ ಟೀಕೆ ಟಿಪ್ಪಣಿಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ಪರಿಪಾಠ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಧನಲಕ್ಷ್ಮೀ ಮಾತನಾಡಿ ವಿದ್ಯಾರ್ಥಿ ಶಿಕ್ಷಕರು ಸಮರ್ಪಕವಾದ ಸಂವಹನ ಕೌಶಲಗಳನ್ನು ಕರಗತಮಾಡಿಕೊಳ್ಳಬೇಕು ಎಂದು ನುಡಿದರು. ಕುಮಾರಿ ಫ್ರೆನ್ಸಿಟ ಜಾನಿಶ್ ಮಥಾಯಿಸ್ ಸ್ವಾಗತ ಕೋರಿದರೆ ಕುಮಾರಿ ಶೇಖ್ ಇಫ್ರ ಉನ್ನೀಸ ಧನ್ಯವಾದ ಸಮರ್ಪಿಸಿದರು. ಕುಮಾರಿ ತೇಜಶ್ರೀ ನಿರೂಪಿಸಿದ ಈ ಕಾರ‍್ಯಕ್ರಮ ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡಿತು.

ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ‍್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಅವರು ‘ದೇಹ ಮತ್ತು ಮನಸ್ಸಿನ ಸಂಲಗ್ನತೆಯೇ ಯೋಗ. ದೈಹಿಕ ಶ್ರಮ ಮತ್ತು ಒಳ್ಳೆಯ ಹವ್ಯಾಸಗಳು ಆರೋಗ್ಯವನ್ನು ವೃದ್ಧಿಸುತ್ತವೆ. ಶೈಕ್ಷಣಿಕವಾಗಿ ಕಲಿತಿರುವ ಯೋಗವನ್ನು ಮುಂದೆಯೂ ಆಸಕ್ತಿಯಿಂದ ರೂಢಿಸಿಕೊಳ್ಳಿ’ ಎಂಬುದಾಗಿ ವಿದ್ಯಾರ್ಥಿ ಶಿಕ್ಷಕರಿಗೆ ಕರೆ ನೀಡಿದರು.

ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಶಿಕ್ಷಕರು ‘ಯೋಗ ಮತ್ತು ಪ್ರಕೃತಿ’ ‘ಗಣಿತದಲ್ಲಿ ಯೋಗ’ ಹಾಗೂ ‘ಯೋಗೋ ರಕ್ಷತಿ ರಕ್ಷಿತ:’ ಎಂಬ ಆಶಯಗಳುಳ್ಳ ರೂಪಕಗಳನ್ನು ಪ್ರದರ್ಶಿಸಿದರು. ಯೋಗದ ಮಹತ್ವ ಸಾರುವ ಹಾಡು ಹಾಗೆಯೇ ಅಭ್ಯಾಸಿಸಿದ ಯೋಗಾಸನಗಳನ್ನು ಕುಮಾರಿ. ಶಿಲ್ಪಶ್ರೀಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಶಿಕ್ಷಕರು ಪ್ರಸ್ತುತಪಡಿಸಿದರು.

ವಿದ್ಯಾರ್ಥಿ ಶಿಕ್ಷಕಿ ಕುಮಾರಿ. ಆಂಡ್ರಿಯಾ ವೆಲೇರಿಯಾ ಡಿಸೋಜ ಸ್ವಾಗತಿಸಿದರೆ ಕುಮಾರಿ. ಅನುಷಾ ಎಸ್. ಶೆಟ್ಟಿ ಧನ್ಯವಾದವನ್ನಿತ್ತರು. ಕುಮಾರಿ. ಶ್ಯಾಮಲಾ ಟಿ. ಕಾರ್ಯಕ್ರಮ ನಿರೂಪಿಸಿದರು.

ಸಂವೇದನಾಶೀಲ ಶಿಕ್ಷಕರಿಂದ ನವ ಸಮಾಜದ ನಿರ್ಮಾಣ ಸಾಧ್ಯ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ಪೂರ್ವ ಪ್ರಾಚಾರ‍್ಯರಾದ ದಿ: ಪ್ರೊ. ಟಿ. ವಿಶ್ವನಾಥ್ ಅವರ ಸ್ಮರಣಾರ್ಥ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಕಾರ‍್ಯಕ್ರಮದ ಅಭ್ಯಾಗತರಾದ ಡಾ: ಎ. ವಿ. ಬಾಳಿಗ ಆಸ್ಪತ್ರೆ ದೊಡ್ಡಣಗುಡ್ಡೆ, ಇಲ್ಲಿಯ ಮನೋವೈದ್ಯರಾದ ಡಾ: ವಿರೂಪಾಕ್ಷ ದೇವರುಮನೆ ಅವರು, ‘ಮದ್ಯವ್ಯಸನಿ ಪಾಲಕರ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು’ ಎಂಬ ವಿಚಾರವನ್ನು ಕುರಿತು ಉಪನ್ಯಾಸ ನೀಡುತ್ತಾ ತರಗತಿಯಲ್ಲಿ ಮದ್ಯವ್ಯಸನಿ ಪಾಲಕರ ಮಕ್ಕಳು ತೋರುವ ವರ್ತನೆಗಳಾದ ಅತಿ ಸಿಟ್ಟು, ಕಲಿಕೆಯಲ್ಲಿ ಅನಾಸಕ್ತಿ, ಅತಿ ಒತ್ತಡ, ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಿರುವುದು ಮುಂತಾದ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಸಲಹೆ ನೀಡುವುದು ಸಂವೇದನಾಶೀಲ ಶಿಕ್ಷಕರ ಜವಾಬ್ದಾರಿ. ಇದರಿಂದ ಭವಿಷ್ಯದಲ್ಲಿ ಭದ್ರ ನವಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು” ಎಂಬ ಆಶಯ ವ್ಯಕ್ತಪಡಿಸಿದರು.

ಕಾಲೇಜಿನ ಸಮನ್ವಯಾಧಿಕಾರಿಗಳಾದ ಡಾ: ಮಹಾಬಲೇಶ್ವರ ರಾವ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ‍್ಯಕ್ರಮದ ಅಭ್ಯಾಗತರಾದ ಡಾ: ವಿರೂಪಾಕ್ಷ ದೇವರುಮನೆ ಅವರ ಮನೋವೈದ್ಯಕೀಯ ಹಿನ್ನೆಲೆಯುಳ್ಳ ಸಾಹಿತ್ಯ ಕೃತಿಗಳ ಮಜಲುಗಳನ್ನು ಪರಿಚಯಿಸುತ್ತಾ ನೆರೆದ ಸರ್ವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.

ಕಾರ‍್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಧನಲಕ್ಷ್ಮೀ ಮಕ್ಕಳು ಮಾನಸಿಕ ಸಮಸ್ಯೆಗಳಿಂದ ಹೊರಬರುವಂತೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂಬ ಆಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಉಪನ್ಯಾಸಕಿ ಶ್ರೀಮತಿ. ಪ್ರೀತಿ ಎಸ್. ರಾವ್ ಧನ್ಯವಾದವನ್ನಿತ್ತರು. ಶ್ರೀಮತಿ ಉಷಾ ಎಚ್. ಕಾರ‍್ಯಕ್ರಮ ನಿರೂಪಿಸಿದರು.

ಸೃಜನಶೀಲ ಬರವಣಿಗೆ ಮನಸ್ಸಿಗೆ ಸಂಜೀವಿನಿ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಕ್ಷಕ’ವನ್ನು ಉಡುಪಿಯ ಶಾರದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸಂಗೀತಾ ಜಾನ್ಸನ್ ಬಿಡುಗಡೆ ಮಾಡಿ ಮನಸ್ಸಿನಲ್ಲಿರುವ ಒತ್ತಡಗಳು ಹಾಗೂ ಗೊಂದಲಗಳನ್ನು ಬರವಣಿಗೆಯ ರೂಪದಲ್ಲಿ ಹೊರಹಾಕಿದಾಗ ಮನಸ್ಸು ಹಗುರಾಗಿ ಸಂತಸ ಹೊಮ್ಮುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸೃಜನಶೀಲ ಬರಹಗಾರರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ವಾರ್ಷಿಕ ಸಂಚಿಕೆಯ ಬಿಡುಗಡೆ ಸಮಾರಂಭದ ಅಧ್ಯಕ್ಷರಾದ ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಅವರು “ಶಿಕ್ಷಣ ವ್ಯವಸ್ಥೆಯಲ್ಲಿ ಸವಾಲುಗಳೇ ತುಂಬಿವೆ. ಅವುಗಳನ್ನು ಎದುರಿಸಬೇಕಾದ ಅನಿವಾರ‍್ಯತೆಯಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮನುಷ್ಯನ ಮನಸ್ಸನ್ನು ಆರ್ದ್ರಗೊಳಿಸುವ, ಆಲೋಚನೆಗಳನ್ನು ಬರಡಾಗಿಸುವ ವ್ಯವಸ್ಥೆಯಿಂದ ಹೊರಬರಲು ಸೃಜನಶೀಲ ಬರವಣಿಗೆಯೊಂದು ಸಂಜೀವಿನಿ. ವಿದ್ಯಾರ್ಥಿ ಶಿಕ್ಷಕರು ವಿವಿಧ ಭಾಷೆಗಳಲ್ಲಿ ವಿವಿಧ ವಿಷಯಗಳನ್ನು ಕುರಿತಂತೆ ಲೇಖನಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ದಾರಿದೀಪವಾಗುತ್ತದೆ” ಎಂದು ಹಾರೈಸಿದರು.

ಕಾಲೇಜಿನ ಸಂಪಾದಕೀಯ ಮಂಡಳಿಯ ಸದಸ್ಯರುಗಳಾದ ಕುಮಾರಿ. ಅಶ್ವಿನಿ ಶಾಸ್ತ್ರೀ ಕೆ. ಸ್ವಾಗತಿಸಿದರೆ ಕುಮಾರಿ ನಾಗರತ್ನ ಧನ್ಯವಾದವನ್ನಿತ್ತರೆ ಶ್ರೀಮತಿ ಶ್ರುತಿ ಮೋಹನ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಹಾಗೂ ಸಂಪಾದಕ ಮಂಡಳಿಯ ಸದಸ್ಯೆ ಶ್ರೀಮತಿ ಮಮತಾ ಸಾಮಂತ್ ಅಭ್ಯಾಗತರನ್ನು ಪರಿಚಯಿಸಿ ಸ್ಮರಣಿಕೆ ನೀಡಿದರು.

Yoga Class for Student Teachers

ದೇಶದ ಇತಿಹಾಸ ಬಹು ಚರ್ಚಿತ ವಿಷಯ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮಾಜ ವಿಜ್ಞಾನಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಭ್ಯಾಗತರಾದ ಟಿ. ಎ. ಪೈ ಆಂಗ್ಲ ಮಾಧ್ಯಮ ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯಿನಿ ಶ್ರೀಮತಿ. ಶೋಭಾ ಪಿ. ಅವರು “ಸಮಾಜ ವಿಜ್ಞಾನದ ಬೋಧನೆಯನ್ನು ಆಸಕ್ತಿದಾಯಕವಾಗಿ ಮಾಡುವ ಮಾರ್ಗೋಪಾಯಗಳು” ಎಂಬ ವಿಷಯವನ್ನು ಕುರಿತಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ: ಮಹಾಬಲೇಶ್ವರ ರಾವ್ ಅವರು ಇಂದು ದೇಶದ ಇತಿಹಾಸ ಬಹು ಚರ್ಚಿತವಾದ ಕ್ಷೇತ್ರ. ಸಮಾಜ ವಿಜ್ಞಾನಗಳ ಪಠ್ಯದಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳಿದ್ದು ಅವುಗಳ ಬಗ್ಗೆ ಭಾವಿ ಶಿಕ್ಷಕರು ಚಿಂತನ ಮಂಥನ ಮಾಡಬೇಕಾದ ಅಗತ್ಯವಿದೆ ಎಂದು ನುಡಿದರು.

ಕಾರ್ಯಕ್ರಮದ ಅಭ್ಯಾಗತರಾದ ಶ್ರೀಮತಿ. ಶೋಭಾ ಪಿ. ಅವರು ಸಮಾಜ ವಿಜ್ಞಾನಗಳನ್ನು ಬೋಧಿಸುವವರು ಪಠ್ಯ ವಿಷಯ, ಭಾಷೆ ಹಾಗೂ ಕಲೆಗಳಲ್ಲಿ ಪರಿಣತರಾಗಿದ್ದಲ್ಲಿ ಬೋಧನೆ ಆಸಕ್ತಿದಾಯಕವಾಗಲು ಸಾಧ್ಯ. ಮಕ್ಕಳ ಪೂರ್ವ ಜ್ಞಾನದೊಂದಿಗೆ ಪಠ್ಯ ವಿಷಯವನ್ನು ಪ್ರಸಕ್ತ ಘಟನೆಗಳೊಂದಿಗೆ ಸಮೀಕರಿಸಿ ಬೋಧಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ವಿದ್ಯಾರ್ಥಿ ಶಿಕ್ಷಕರು ಅಂಥ ಅನುಭವಗಳನ್ನು ಮಕ್ಕಳಿಗೆ ನೀಡುವ ರೀತಿನೀತಿಗಳ ಬಗ್ಗೆ ಯೋಚಿಸಬೇಕು ಎಂದು ಕರೆನೀಡಿದರು.

ವಿದ್ಯಾರ್ಥಿ ಶಿಕ್ಷಕರಾದ ಬೆನಿಟಾ ಜ್ಯುವೆನ್ಸ್ ಕ್ರಾಸ್ಟೊ ಅತಿಥಿಗಳನ್ನು ಸ್ವಾಗತಿಸಿದರು. ಕೆ. ಸಂಧ್ಯಾ ಪ್ರಭು ಅತಿಥಿಗಳನ್ನು ಪರಿಚಯಿಸಿದರು. ರಜನಿ ಸಾಮಗ ಧನ್ಯವಾದವನ್ನಿತ್ತರು. ಮಂಜುಳಾ ವೈ ಕಾರ್ಯಕ್ರಮ ನಿರ್ವಹಿಸಿದರು.

ಓದುಗಾರಿಕೆಯನ್ನು ತಪಸ್ಸಿನಂತೆ ಸ್ವೀಕರಿಸಬೇಕು

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಶಿಕ್ಷಕ ಬಿಡುಗಡೆಯ ಕಾರ್ಯಕ್ರಮ ಡಾ: ಮಹಾಬಲೇಶ್ವರ ರಾವ್ ಅವರ ಅಧ್ಯಕ್ಷತಯಲ್ಲಿ ಜರಗಿತು. ಸಂಚಿಕೆಯನ್ನು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ: ಪ್ರಕಾಶ್ ಕಣಿವೆಯವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಭ್ಯಾಗತರಾದ ಪ್ರೊ: ಪ್ರಕಾಶ್ ಕಣಿವೆಯವರು ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕ. ಹೀಗೆ ಪಡೆದ ಅನುಭವಗಳಿಂದ ಶಿಕ್ಷಕನೊಬ್ಬ ಭವಿಷ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಬಹುದು. ಅದಕ್ಕೆ ಓದು ನಿರಂತರವಾಗಬೇಕು ವಿದ್ಯಾರ್ಥಿ ಶಿಕ್ಷಕರು ಆ ನಿಟ್ಟಿನಲ್ಲಿ ಸಾಗಬೇಕು ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷರಾದ ಕಾಲೇಜಿನ ಸಮನ್ವಯಾಧಿಕಾರಿ ಡಾ: ಮಹಾಬಲೇಶ್ವರ ರಾವ್ ಅವರು ಸಂಚಿಕೆಗಾಗಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತಾ, ಉದೀಯಮಾನ ಬರಹಗಾರರು ಬೇರೆ ಬೇರೆ ವಿಷಯಗಳನ್ನು ಕೈಗೆತ್ತಿಕೊಂಡು ಬರೆಯುವಲ್ಲಿ ಆಸಕ್ತರಾಗಬೇಕು ಅದಕ್ಕೆ ಓದುಗಾರಿಕೆಯನ್ನು ಒಂದು ತಪಸ್ಸಿನಂತೆ ಸ್ವೀಕರಿಸಬೇಕು ಎಂದು ಹೇಳಿದರು. ನಿರಂತರ ಓದಿನಿಂದ ಒಂದಿಷ್ಟು ನಿಷ್ಕ್ರಿಯ ಶಬ್ದಭಂಡಾರವನ್ನು ಬೆಳೆಸಿಕೊಂಡು, ಬರವಣಿಗೆಯ ರೂಪದಲ್ಲಿ ಸಂಸ್ಕಾರಯುತ ಶೈಲಿಯಲ್ಲಿ ಅಭಿವ್ಯಕ್ತಿಗೊಳಿಸಲು ಪ್ರಯತ್ನಿಸಿದಾಗ ಸುಂದರ ಸಂಚಿಕೆಗಳು ಮೂಡಿ ಬರುತ್ತವೆ. ವಿದ್ಯಾಲಯಗಳ ವಾರ್ಷಿಕ ಸಂಚಿಕೆಗಳು ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ ಪುರಾವೆಗಳು ವಿದ್ಯಾರ್ಥಿ ಶಿಕ್ಷಕರು ಸಂಚಿಕೆಗಳ ಗುಣಮಟ್ಟ ಉನ್ನತೀಕರಿಸುವಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಉಪನ್ಯಾಸಕಿ ಶ್ರೀಮತಿ ಧನಲಕ್ಷ್ಮೀ ಅಭ್ಯಾಗತರನ್ನು ಸ್ವಾಗತಿಸಿ ಪರಿಚಯಿಸಿದರು. ಶ್ರೀಮತಿ ಪ್ರೀತಿ ಎಸ್. ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀಮತಿ ಮಮತಾ ಸಾಮಂತ್ ಧನ್ಯವಾದವನ್ನಿತ್ತರು. ಶ್ರೀಮತಿ ಉಷಾ ಹೆಚ್ ಕಾರ‍್ಯಕ್ರಮ ನಿರ್ವಹಿಸಿದರು.

ಡಾ: ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯಕ್ಕೆ ನಿಧಿ ಹಸ್ತ್ತಾಂತರ

[ಗೆಳೆಯರ ಬಳಗದಿಂದ ನಿಧಿ ಹಸ್ತಾಂತರ]

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ೨೦೦೫-೨೦೦೬ನೇ ಸಾಲಿನ ವಿದ್ಯಾರ್ಥಿ ಶಿಕ್ಷಕರಾಗಿದ್ದ ದಿ:ಉತ್ತಮ ನಾಯಕ್ ಅವರ ಸ್ಮರಣಾರ್ಥ ನಿಧಿ ಹಸ್ತಾಂತರ ಕಾರ‍್ಯಕ್ರಮ ‘ಉತ್ತಮ ನಾಂiiಕ್ ಗೆಳೆಯರ ಬಳಗ’ದ ಸಹಯೋಗದೊಂದಿಗೆ ಡಾ: ಮಹಾಬಲೇಶ್ವರ ರಾವ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಕಾಲೇಜಿನ ಪೂರ್ವ ವಿದ್ಯಾರ್ಥಿ ಶಿಕ್ಷಕರಾಗಿದ್ದ ಉತ್ತಮ ನಾಯಕ್ ಆಕಸ್ಮಿಕ ಅನಾರೋಗ್ಯದಿಂದ ವಿಧಿವಶರಾಗಿದ್ದು ಅವರ ಸ್ಮರಣಾರ್ಥ ಅವರ ಸಹಪಾಠಿಗಳು ನಿಧಿಯನ್ನು ಸಂಗ್ರಹಿಸಿ ಅದನ್ನು ಕಾಲೇಜಿಗೆ ಸಮರ್ಪಿಸಿ ಉತ್ತಮ ನಾಯಕ್‌ರವರ ಸವಿನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಬೇಕೆಂಬ ಸದಾಶಯವನ್ನು ವ್ಯಕ್ತಪಡಿಸಿದರು. ನಿಧಿಯನ್ನು ಸ್ವೀಕರಿಸಿದ ಕಾರ್ಯಕ್ರಮದ ಅಧ್ಯಕ್ಷರಾದ ಡಾ: ಮಹಾಬಲೇಶ್ವರ ರಾವ್ ರವರು ಉತ್ತಮ ನಾಯಕ್ “ ಓರ್ವ ವ್ಯಕ್ತಿ, ಆಧ್ಯಾಪಕ ಹಾಗೂ ವಿದ್ಯಾರ್ಥಿಯಾಗಿ ಅನ್ವರ್ಥನಾಮವಾಗಿದ್ದರು” ಅಧ್ಯಾಪಕನಾಗಿ ಅವರು ವಿವಿಧ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿ ಗೌರವಕ್ಕೆ ಪಾತ್ರರಾಗಿದ್ದನ್ನು ಮನದಾಳದ ನುಡಿಗಳಿಂದ ಸ್ಮರಿಸಿಕೊಂಡಾಗ ನೆರೆದವರ ಮನದುಂಬಿ ಬಂತು. ಉತ್ತಮ ನಾಯಕ್‌ರವರ ನಿಕಟ ಸ್ನೇಹಿತರಾಗಿದ್ದ ಶ್ರೀ ಕೃಷ್ಣ ದೇವಾಡಿಗ ಸ್ನೇಹಿತನ ವ್ಯಕ್ತಿತ್ವವನ್ನು ಪರಿಚಯಿಸಿದರಲ್ಲದೆ ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಗೊಂಡ ಉತ್ತಮ ನಾಯಕ್‌ರವರ ಕವನವನ್ನು ವಾಚಿಸಿದರು. ಇನ್ನೋರ್ವ ಸ್ನೇಹಿತ ಶ್ರೀ ನಾಗರಾಜ್ ಖಾರ್ವಿ ಅಗಲಿದ ಸ್ನೇಹಿತನಿಗೆ ತಾನೇ ರಚಿಸಿದ ಕವಿತೆ ಓದಿ ನುಡಿನಮನವನ್ನು ಸಲ್ಲಿಸಿದರು.

ಶ್ರೀಮತಿ ಕುಶಾಲಿನಿ ಸಿ.ಎನ್. ಸ್ವಾಗತಿಸಿದರು. ಗೆಳೆಯ ಶ್ರೀ.ಪಿ.ವಿ. ಆನಂದ್ ಪ್ರಾಶ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ. ಪ್ರೀತಿ ಎಸ್. ರಾವ್ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ಶ್ರೀಮತಿ ಉಷಾ ಹೆಚ್. ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಅಬ್ದುಲ್ ರವೂಫ್ ಧನ್ಯವಾದವನ್ನಿತ್ತರು.

ಪರಿಸರದಲ್ಲಿ ಗಣಿತ ಅಡಕವಾಗಿದೆ.

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಣಿತ ವಿಭಾಗದ ವಿದ್ಯಾರ್ಥಿ ಶಿಕ್ಷಕರು ‘ಪರಿಸರದಲ್ಲಿ ಗಣಿತ’ ಎಂಬ ವಿಚಾರವನ್ನು ಕುರಿತಾಗಿ ವಿಶೇಷ ಕಾರ‍್ಯಕ್ರಮವನ್ನು ಏರ್ಪಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ. ಸುಮಾ ಕೆ.ವಿ. ಮುಖ್ಯಸ್ಥರು, ಗಣಿತ ವಿಭಾಗ ಪೂರ್ಣ ಪ್ರಜ್ಞ ಪದವಿಪೂರ್ವ ಕಾಲೇಜು, ಉಡುಪಿ, ಇವರು ಪರಿಸರದಲ್ಲಿರುವ ಹೂವು, ಹಣ್ಣು, ಎಲೆ, ಮರಗಳ ರಚನೆಯಲ್ಲಿ ಹಾಗೂ ಮಾನವನ ಶರೀರದ ಅಂಗರಚನೆಯಲ್ಲಿ (ಸ್ವರ್ಣಾನುಪಾತ) ಗೋಲ್ಡನ್ ರೇಶಿಯೋದ ಪರಿಕಲ್ಪನೆಯನ್ನು ಕಾಣಬಹುದು. ಗಣಿತವು ನಮ್ಮ ಪರಿಸರದಲ್ಲಿ ಅಡಕವಾಗಿದ್ದು, ಜೀವನಕ್ಕೆ ಅತೀ ಅಗತ್ಯವಾಗಿದೆ. ಎಲ್ಲರೂ ಗಣಿತವನ್ನು ಸುಲಭವಾಗಿ ಸರಳವಾಗಿ ಕಲಿಯುವ ನಿಟ್ಟಿನಲ್ಲಿ ಬೋಧನೆ ಮೂಡಿ ಬರಬೇಕೆಂದು ವಿದ್ಯಾರ್ಥಿ ಶಿಕ್ಷಕರಿಗೆ ಕರೆನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ. ಕುಶಾಲಿನಿ ಸಿ.ಎನ್. “ವಿದ್ಯಾರ್ಥಿಗಳು ಗಣಿತವನ್ನು ತಮ್ಮ ಭವಿಷ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಬೋಧನೆಯಲ್ಲಿ ಹೊಸ ವಿಧಾನ ಹಾಗೂ ತಂತ್ರಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು” ಎಂದು ನುಡಿದರು.

ವಿದ್ಯಾರ್ಥಿ ಶಿಕ್ಷಕರಾದ ಅಶ್ವಿನಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಉಷಾ ಹೆಚ್. ಅತಿಥಿಗಳಿಗೆ ಪುಷ್ಪ ಹಾಗೂ ಸ್ಮರಣಿಕೆ ನೀಡಿದರು. ವಿದ್ಯಾರ್ಥಿ ಶಿಕ್ಷಕರಾದ ರಂಜಿತಾ ಅತಿಥಿಗಳನ್ನು ಪರಿಚಯಿಸಿದರು. ಮೀನಾಕ್ಷಿ ಧನ್ಯವಾದವನ್ನಿತ್ತರು. ವಿವೇಕ್ ಹಾಗೂ ಅನುಷಾ ಕಾರ್ಯಕ್ರಮ ನಿರೂಪಿಸಿದರು. ಡಾ: ಮಹಾಬಲೇಶ್ವರ ರಾವ್ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುಂದರ ಸಮಾಜದ ನಿರ್ಮಾತೃಗಳಾಗಬೇಕು

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ಮತ್ತು ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ‘ಸಮಾಜ ವಿಜ್ಞಾನಗಳು ಹಾಗೂ ಬಹುತ್ತ್ವ’ ಎಂಬ ವಿಚಾರವನ್ನು ಕುರಿತಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಭ್ಯಾಗತರಾದ ಡಾ: ದುಗ್ಗಪ್ಪ ಕಜೆಕಾರ್, ಮುಖ್ಯಸ್ಥರು, ಸಮಾಜ ಕಾರ‍್ಯ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಇವರು ‘ಸಾಮಾಜಿಕ ಔದ್ಯೋಗಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಬಹುತ್ವವಿದೆ. ಆದರೆ ಅವುಗಳನ್ನು ಅರ್ಥಮಾಡಿಕೊಂಡು ಸಂಸ್ಕೃತಿಯ ಅನನ್ಯತೆಯನ್ನು ಹಾಗೂ ಸಾಮಾಜಿಕ ಸಾಮರಸ್ಯ ಉಂಟುಮಾಡುವ ನಿಟ್ಟಿನಲ್ಲಿ ಯೋಚಿಸಿ ಅಭಿವೃದ್ಧಿಯ ಮಾದರಿಗಳನ್ನು ಪ್ರಾದೇಶಿಕ ಜನರ ಅಗತ್ಯತೆಯ ಹಿನ್ನೆಲೆಯಿಂದ ಅಳವಡಿಸಿಕೊಂಡಾಗ ಹೊಂದಾಣಿಕೆಯಿಂದ ಬದುಕಲು ಸಾಧ್ಯ. ವಿದ್ಯಾರ್ಥಿ ಶಿಕ್ಷಕರು ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿ ಸುಂದರ ಸಮಾಜದ ನಿರ್ಮಾತೃಗಳಾಗಬೇಕು ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ‘ಬಹುತ್ವದ ಪರಿಕಲ್ಪನೆಗೆ ಸುಧೀರ್ಘ ಇತಿಹಾಸವಿದೆ ಅದನ್ನು ವಿದ್ಯಾರ್ಥಿಗಳು ವಿಶಾಲವಾದ, ಉದಾರವಾದ ನೆಲೆಯಲ್ಲಿ ಯೋಚಿಸಿ ಮಕ್ಕಳಿಗೆ ಬೋಧಿಸಬೇಕು’ ಎಂದು ಕರೆನೀಡಿದರು.

ವಿದ್ಯಾರ್ಥಿ ಶಿಕ್ಷಕರಾದ ಸ್ಮೃತಿ ಸ್ವಾಗತಿಸಿದರು. ರೋಝಾ ಅತಿಥಿಗಳನ್ನು ಪರಿಚಯಿಸಿದರು. ಸುಮಿತ್ ಜತ್ತನ್ನ ಧನ್ಯವಾದವನ್ನಿತ್ತರು. ಪೃಥ್ವೀರಾಜ್ ಕಾಂiiಕ್ರಮ ನಿರ್ವಹಿಸಿದರು.

ಮಕ್ಕಳ ಸಾಹಿತಿಯೊಂದಿಗೆ ಸಂವಾದ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಶಿಕ್ಷಕರಿಗಾಗಿ ಮಕ್ಕಳ ಸಾಹಿತಿಯೊಂದಿಗೆ ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಅವರು “ಶಿಕ್ಷಣ ವ್ಯವಸ್ಥೆಯಲ್ಲಿ ಚಿಂತನ ಮಂಥನ ಅತೀ ಅಗತ್ಯ. ಆ ನಿಟ್ಟಿನಲ್ಲಿ ಒಬ್ಬ ಒಳ್ಳೆಯ ಅಧ್ಯಾಪಕ ಏಕಾಗ್ರಚಿತ್ತದ ಆಲಿಸುವಿಕೆ ಹಾಗೂ ಅವಲೋಕನ ಗುಣಗಳನ್ನು ಮೈಗೂಡಿಸಿಕೊಂಡು ಕಾವ್ಯವನ್ನು ಓದಬೇಕು, ಅದು ಹೃದಯಾಂತರಾಳದಲ್ಲಿ ಬೆಳೆದು ವಿಶಿಷ್ಟ ಅನುಭವ ನೀಡುತ್ತದೆ. ಕಾವ್ಯಕ್ಕೆ ಅಂತಃಸ್ಥ ಶಕ್ತಿಯಿದೆ. ಅದನ್ನು ವಿದ್ಯಾರ್ಥಿ ಶಿಕ್ಷಕರು ಒಳ್ಳೆಯ ಓದುಗರಾಗಿ ಅನುಭವದ ಮೂಲಕ ಪಡೆದುಕೊಂಡು ಆ ಅನುಭವವನ್ನು ಪುಷ್ಟೀಕರಿಸುವತ್ತ ಅಧ್ಯಯನ ಸಾಗಿಸಬೇಕು” ಎಂದು ಹಾರೈಸಿದರು.

ಅಭ್ಯಾಗತರಾದ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಶ್ರೀಮತಿ ವಿಜಯಶ್ರೀ ಹಾಲಾಡಿ ತಮ್ಮ ಕವನಗಳನ್ನು ವಾಚನ ಮಾಡಿ ಅವುಗಳಲ್ಲಿ ಅಡಗಿರುವ ವಿಶಿಷ್ಟತೆಯನ್ನು ವರ್ಣಿಸುವುದರೊಂದಿಗೆ ಸಂವಾದವನ್ನು ನಡೆಸಿಕೊಟ್ಟರು.

ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಕುಶಾಲಿನಿ ಸಿ.ಎನ್. ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ. ಉಷಾ ಹೆಚ್. ಪುಷ್ಪ ಹಾಗೂ ಸ್ಮರಣಿಕೆ ನೀಡಿದರು. ಶ್ರೀಮತಿ ಮಮತಾ ಸಾಮಂತ್ ಧನ್ಯವಾದವನ್ನಿತ್ತರು. ಶ್ರೀಮತಿ ರೂಪಾ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಶಿಕ್ಷಕರು ಕಲಾಸೂಕ್ಷ್ಮಜ್ಞರಾಗಬೇಕು

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಶಿಕ್ಷಕರಿಗಾಗಿ ಆಯೋಜಿಸಿದ್ದ ದಿ: ಕೆ. ಆರ್. ಹಂದೆ ಸಂಸ್ಮರಣಾರ್ಥ ಉಪನ್ಯಾಸ ಕಾರ‍್ಯಕ್ರಮದ ಅಧ್ಯಕ್ಷರಾದ ಡಾ: ಮಹಾಬಲೇಶ್ವರ ರಾವ್ ಅವರು “ಶಿಕ್ಷಕರು ಅಧ್ಯಾಪನದ ಜೊತೆಗೆ ಕಲಾಭಿರುಚಿಯನ್ನು ಮೈಗೂಡಿಸಿಕೊಂಡು ಅದನ್ನು ಬೋಧನೆಯಲ್ಲಿ ಅಳವಡಿಕೊಂಡಾಗ ಮಕ್ಕಳಿಗೆ ಕಲಿಕೆ ಸುಲಭವಾಗಿ ಕಲಾಸಂವೇದನೆಯ ಅನುಭವ ನೀಡಲು ಸಾಧ್ಯ” ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ಅಭ್ಯಾಗತರಾದ ಶ್ರೀಯುತ ಸುರೇಶ್ ಕುಲಕರ್ಣಿ ಧಾರವಾಡ ಇವರು ಶಿಕ್ಷಕ ಹಾಗೂ ಕಲಾ ರಸಪ್ರಶಂಸೆ ಎಂಬ ವಿಚಾರವನ್ನು ಕುರಿತಂತೆ ಪ್ರಾಯೋಗಿಕವಾಗಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಭಾಷಾ ಕಲಿಕೆ ಹಾಗೂ ವಿಜ್ಞಾನ ಬೋಧನೆಯನ್ನು ಹೇಗೆ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡಬಹುದು ಎಂಬುದನ್ನು ನವುರಾದ ಹಾಸ್ಯದ ಮೂಲಕ ಪ್ರದರ್ಶಿಸಿದರು.

ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಕಲಿಸುವ ವಿಧಾನದಲ್ಲಿ ದೋಷವಿದ್ದರೆ ಕಲಿಕೆಯಲ್ಲಿ ಪರಿಣಾಮಕಾರಿಯಾಗದು. ವಿದ್ಯಾರ್ಥಿಗಳಿಗೆ ಆಂಗಿಕ, ವಾಚಿಕ ಅಭಿನಯ ಹಾಗೂ ಚಿತ್ರಗಳ ಮೂಲಕ ಕಲಿಕೆಯ ಅನುಭವ ನೀಡಬೇಕು. ಹೀಗಾಗಲು ಸ್ವತಃ ಶಿಕ್ಷಕನಿಗೆ ಕಲಾ-ಸಂವೇದನೆಯಿರಬೇಕು. ವಿದ್ಯಾರ್ಥಿ ಶಿಕ್ಷಕರು ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂಬುದಾಗಿ ಕರೆ ನೀಡಿದರು.

ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ. ಉಷಾ ಹೆಚ್. ಅಭ್ಯಾಗತರನ್ನು ಪರಿಚಯಿಸಿದರು. ಶ್ರೀಮತಿ ಪ್ರೀತಿ ಎಸ್. ರಾವ್ ಸ್ಮರಣಿಕೆ ನೀಡಿದರು. ಶ್ರೀಮತಿ ಕುಶಾಲಿನಿ ಸಿ.ಎನ್ ಧನ್ಯವಾದವನ್ನಿತ್ತರು. ಶ್ರೀಮತಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಣೆ ಮಾಡಿದರು.

ಶಿಕ್ಷಣ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಡಾ: ಟಿ. ಎಂ. ಎ. ಪೈ ಪ್ರತಿಷ್ಠಾನ ಮತ್ತು ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಸಹಯೋಗದೊಂದಿಗೆ ಉಡುಪಿಯ ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ಶ್ರೀ ಬೈಕಾಡಿ ಜನಾರ್ದನ ಆಚಾರ್ ಹಾಗೂ ಶ್ರೀ.ಬಿ. ಸೀತಾರಾಮ ಭಟ್ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಬೈಕಾಡಿ ಜನಾರ್ದನ ಆಚಾರ್ ಒಳ್ಳೆಯ ಅಧ್ಯಾಪಕ ಜ್ಞಾನವನ್ನು ಸಂಪಾದಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿ ಸಮಾಜಕ್ಕೆ ಮಾದರಿಯಾಗಬೇಕು. ಮುಂದೆ ಶಿಕ್ಷಕರಾಗುವ ವಿದ್ಯಾರ್ಥಿ ಶಿಕ್ಷಕರು ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಳಬೇಕೆಂಬ ಆಶಯ ವ್ಯಕ್ತಪಡಿಸಿದರು.

ಶ್ರೀಯುತ ಸೀತಾರಾಮ ಭಟ್ ಸಮ್ಮಾನ ಸ್ವೀಕರಿಸಿ ‘ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಕರಿಸುವ ರಂಗವೇ ಶಿಕ್ಷಕ ವ್ಥತ್ತಿ. ಅದರ ಮೇಲೆ ಗೌರವ, ಪ್ರೀತಿಯನ್ನಿಟ್ಟುಕೊಳ್ಳಬೇಕು ಅಂತೆಯೇ ಶಿಕ್ಷಕರಾಗಿ ಸಮಾಜದಲ್ಲಿ ಗುತುತಿಸಿಕೊಳ್ಳುವಲ್ಲಿ ಡಾ: ಟಿ.ಎಂ.ಎ.ಪೈ ಶಿಕ್ಷಣ ಸಂಸ್ಥೆಗೆ ತಾನು ಚಿರಋಣಿ ಅಂತಹ ಹೆಮ್ಮೆಯ ಸಂಸ್ಥೆಯ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಿ’ ಎಂಬ ಕರೆಯನ್ನು ವಿದ್ಯಾರ್ಥಿ ಶಿಕ್ಷಕರಿಗೆ ನೀಡಿದರು.

ಕಾರ‍್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಅಧ್ಯಾಪನದಲ್ಲಿ ಕಲಿಕೆ ಮುಖ್ಯ. ಜೀವನದಲ್ಲಿ ಬರುವ ಸಮಸ್ಯೆಗಳೆಂಬ ಪ್ರವಾಹವನ್ನು ಚೈತನ್ಯದಿಂದ ಎದುರಿಸಿ ದಡ ಸೇರಬೇಕು ಆಗ ಕೃತಜ್ಞತೆಯ ಭಾವ ನಮ್ಮದಾಗುತ್ತದೆ. ಸಮಾಜದಲ್ಲಿ ಕಾಲೇಜಿನ ವಿದ್ಯಾರ್ಥಿ ಶಿಕ್ಷಕರು ಗುರುತಿಸಿಕೊಂಡಾಗ ವೃತ್ತಿಗೆ ಮಾತ್ರವಲ್ಲ ವಿದ್ಯಾಸಂಸ್ಥೆಗೂ ಸಾರ್ಥಕ. ಅಂತಹ ಪ್ರಯತ್ನವನ್ನು ವಿದ್ಯಾರ್ಥಿ ಶಿಕ್ಷಕರು ಮಾಡಬೇಕೆಂದು ಹಾರೈಸಿದರು.

ಕಾರ್ಯಕ್ರಮದ ಅಭ್ಯಾಗತರಾದ ಶ್ರೀಯುತ ವಿ.ಎಸ್.ಸಿ. ಹೊಳ್ಳ ಡಾ: ಟಿ. ಎಂ. ಎ. ಪೈ ಪ್ರತಿಷ್ಠಾನ ಹಾಗೂ ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಕೆಲವು ಶೈಕ್ಷಣಿಕ ಕೊಡುಗೆಗಳನ್ನು ವಿವರಿಸಿದರು. ಪುಂಡಲೀಕ ಶೆಣೈ ಟ್ರಸ್ಟ್‌ನ ಟ್ರಸ್ಟಿಯಾದ ಶ್ರೀ ಹರೀಶ್ ಶೆಣೈ ಟ್ರಸ್ಟ್‌ನ ಉದ್ದೇಶ ಹಾಗೂ ಹಿನ್ನೆಲೆಯ ಮಾಹಿತಿ ನೀಡಿದರು. ವಿದ್ಯಾರ್ಥಿ ಶಿಕ್ಷಕ ರೋಲ್ವಿನ್ ಅರಾನ್ಹ ನಾಡು ಕಂಡ ಶ್ರೇಷ್ಠ ಶಿಕ್ಷಕ, ಚಿಂತಕ ಡಾ: ರಾಧಾಕೃಷ್ಣನ್ ಅವರ ಬಗ್ಗೆ ನೆನಪಿನ ಒಂದು ನೋಟ ನೀಡಿದರು.

ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಪ್ರೀತಿ ಎಸ್. ರಾವ್ ಸ್ವಾಗತಿಸಿದರು. ಶ್ರೀಮತಿ ರೂಪಾ ಕೆ. ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಧನಲಕ್ಷ್ಮೀ ಪುಷ್ಪ ಹಾಗೂ ಸ್ಮರಣಿಕೆ ನೀಡಿದರು. ಶ್ರೀಮತಿ ಕುಶಾಲಿನಿ ಸಿ. ಎನ್. ಧನ್ಯವಾದವನ್ನಿತ್ತರು. ಶ್ರೀಮತಿ ಉಷಾ ಹೆಚ್. ಕಾರ್ಯಕ್ರಮ ನಿರ್ವಹಿಸಿದರು.

ಶಿಕ್ಷಕರಿಗೆ ವಸ್ತ್ರ ಸಂಹಿತೆ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಶಿಕ್ಷಕರಿಗೆ ವಸ್ತ್ರ ಸಂಹಿತೆ’ ಅನ್ನುವ ವಿಷಯದ ಬಗ್ಗೆ ಡಾ: ಮಹಾಬಲೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ಅಭಿಪ್ರಾಯ ಮಂಡನಾ ಕಾರ್ಯಕ್ರಮ ವಿದ್ಯಾರ್ಥಿ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿತ್ತು.

ಕೆಲವು ವಿದ್ಯಾರ್ಥಿ ಶಿಕ್ಷಕರು ವಸ್ತ್ರ ಸಂಹಿತೆ ಶಿಕ್ಷಕರಿಗೆ ಇರುವುದು ಒಳ್ಳೆಯದು ಸಾಂಸ್ಕೃತಿಕ ಹಾಗೂ ಆರ್ಥಿಕ ದೃಷ್ಟಿಕೋನದಿಂದ ಇದು ಹೆಚ್ಚು ಪರಿಣಾಮಕಾರಿಯಾದರೂ ಏಕತೆಯನ್ನಾಗಲಿ ಅಥವಾ ವ್ಯಕ್ತಿತ್ವವನ್ನಾಗಲಿ ಅಳೆಯುವಲ್ಲಿ ಸಹಕಾರಿಯಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವು ವಿದ್ಯಾರ್ಥಿ ಶಿಕ್ಷಕರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳು ಆದ ಹಾಗೆ ಶಿಕ್ಷಕರ ಉಡುಗೆಗಳಲ್ಲಿ ಬದಲಾವಣೆ ಆಗುವುದು ಸಹಜ ಎಂಬಂತೆ ಸ್ವೀಕರಿಸಿ ಕೆಲವು ಇತಿಮಿತಿಗಳನ್ನು ಅನುಸರಿಸಬೇಕು ಎಂಬ ನಿಯಮವಿದ್ದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ‍್ಯರಾದ, ಕಾರ್ಯಕ್ರಮದ ಅಧ್ಯಕ್ಷರಾದ ಡಾ: ಮಹಾಬಲೇಶ್ವರ ರಾವ್ ಅವರು ಪಾಶ್ಚಾತ್ಯರ ಪ್ರಭಾವ ಶಿಕ್ಷಣದ ಮೇಲೂ ಆದ ಹಾಗೆ ಉಡುಗೆಯ ಮೇಲೂ ಆಗಿದೆ. ಸಮವಸ್ತ್ರ ಧರಿಸಿದ ಮಾತ್ರಕ್ಕೆ ಅದು ಸಮಾನತೆಯ ಸೂಚಕವಲ್ಲ. ಸಮಾನತೆಗೆ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧವಿದೆ. ಆದರೆ ಶಿಕ್ಷಕರ ವಸ್ತ್ರ ಸಂಹಿತೆ ವಿಚಾರದಲ್ಲಿ ಸಮಾಜದಲ್ಲಿ ಪರಂಪರಾಗತವಾದ ಧೋರಣೆಯಿದೆ. ಅದು ಶಿಕ್ಷಣ ಸಂಸ್ಥೆ, ಸಮಾಜ, ಸಂಸ್ಕೃತಿ, ಕಾಲ ಹಾಗೂ ಮೌಲ್ಯಗಳ ಹಿನ್ನೆಲೆಗೆ ಸಂಬಂಧಿಸಿದೆ. ಆದ್ದರಿಂದ ಸಮಾಜದ ನಿರೀಕ್ಷೆಯಂತೆ ಅನುಸರಿಸಬೇಕಾದ ಅನಿವಾರ‍್ಯತೆ ಶಿಕ್ಷಕರ ಮೇಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಉಷಾ. ಹೆಚ್. ಸ್ವಾಗತಿಸಿದರು. ಶ್ರೀಮತಿ ಧನಲಕ್ಷ್ಮೀ ಧನ್ಯವಾದವನ್ನಿತ್ತರು. ಶ್ರೀಮತಿ ಪ್ರೀತಿ ಎಸ್. ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಡಾ: ಮಹಾಬಲೇಶ್ವರ ರಾವ್‌ಗೆ ಕಸಾಪ ದತ್ತಿನಿಧಿ ಪುರಸ್ಕಾರ

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಡಾ: ಮಹಾಬಲೇಶ್ವರ ರಾವ್ ಅವರ ‘ಅಪರಾಧಿಯ ಅಂತರಂಗ’ ಎಂಬ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2016ನೆ ಸಾಲಿನ ಡಾ: ಎ. ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ಪುಸ್ತಕ ದತ್ತಿ ನಿಧಿ ಪುರಸ್ಕಾರ ಲಭಿಸಿದೆ. ಇದೇ ಲೇಖಕರ ‘ಆಗುತ್ತೆ ಅನ್ನಿ, ಆಗೋಲ್ಲ ಅನ್ಬೇಡಿ’ ಕೃತಿಗೆ 2014ರಲ್ಲಿ ಹಾಗೂ ‘ಹೆತ್ತವರೆ, ಮಕ್ಕಳ ಬಗ್ಗೆ ಕಾಳಜಿ ವಹಿಸಿ’ ಕೃತಿಗೆ 2015ರಲ್ಲಿ ಡಾ: ಎ. ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರ ದೊರೆತಿರುವುದು ಉಲ್ಲೇಖನೀಯ.

ವಾರ್ಷಿಕ ಸಂಚಿಕೆ ‘ಶಿಕ್ಷಕ’ ಬಿಡುಗಡೆ

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಕ್ಷಕ’ ಬಿಡುಗಡೆಗೊಳಿಸಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಧುಸೂದನ ಭಟ್ ‘ಒಬ್ಬ ಶ್ರೇಷ್ಠ ಶಿಕ್ಷಕ ವಿದ್ಯಾರ್ಥಿಗಳ ಮಟ್ಟವನ್ನು ಅರಿತುಕೊಂಡು ಜ್ಞಾನವನ್ನು ಮಟ್ಟಿಸುತ್ತಾನೆ’ ಅಂತಹ ಶ್ರೇಷ್ಠ ಶಿಕ್ಷಕರು ನೀವಾಗಬೇಕೆಂದು ಕಾಲೇಜಿನ ವಿದ್ಯಾರ್ಥಿ ಶಿಕ್ಷಕರಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯರಾದ ಡಾ:ಮಹಾಬಲೇಶ್ವರ ರಾವ್ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಬರವಣಿಗೆಯ ಸಾಮರ್ಥ್ಯವನ್ನು ಬೆಳೆಸುವುದು ಶಿಕ್ಷಕರ ಜವಾಬ್ದಾರಿ. ಸದಾ ಪ್ರೋತ್ಸಾಹ ಹಾಗೂ ಪ್ರೇರಣೆಯ ಮೂಲಕ ಮಾತ್ರ ಇದು ಸಾಧ್ಯ. ತರಗತಿಯಲ್ಲಿ ಭಾವಿ ಲೇಖಕರು, ನಾಯಕರು ಹಾಗೂ ಧೀಮಂತ ವ್ಯಕ್ತಿಗಳಿರುತ್ತಾರೆ. ಇಂಥವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡಿವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ. ಅದನ್ನು ಅರಿತುಕೊಂಡು ವಿದ್ಯಾರ್ಥಿ ಶಿಕ್ಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹಾರೈಸಿದರು.

ಶ್ರೀಮತಿ.ಮಮತಾ ಸಾಮಂತ್ ಸ್ವಾಗತಿಸಿದರು. ಶ್ರೀಮತಿ.ಧನಲಕ್ಷ್ಮೀ ಧನ್ಯವಾವನ್ನಿತ್ತರು. ಶ್ರೀಮತಿ.ಕುಶಾಲಿನಿ ಸಿ.ಎನ್. ಕಾರ್ಯಕ್ರಮ ನಿರ್ವಹಿಸಿದರು.

‘ಅದಿತಿ’ ಆರ್ಟ್‌ಗ್ಯಾಲರಿಗೆ ಭೇಟಿ

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ತೃತೀಯ ಸೆಮೆಸ್ಟರ್‌ನ ವಿದ್ಯಾರ್ಥಿ ಶಿಕ್ಷಕರು ಕುಂಜಿಬೆಟ್ಟುವಿನಲ್ಲಿರುವ ‘ಅದಿತಿ’ ಆರ್ಟ್‌ಗ್ಯಾಲರಿಗೆ ಈಚೆಗೆ ಭೇಟಿ ನೀಡಿದರು. ಡಾ: ಕಿರಣ್ ಆಚಾರ‍್ಯ, ಕುಮಾರಿ

ಅದಿತಿ ಆಚಾರ್ಯ ಹಾಗೂ ಶ್ರೀ ಆಸ್ಟ್ರೋ ಮೋಹನ್ ಅವರು ಆರ್ಟ್‌ಗ್ಯಾಲರಿಯ ಸ್ಥಾಪನೆಯ ಉದ್ದೇಶ, ಪ್ರದರ್ಶನಕ್ಕಿಟ್ಟಿರುವ ಕಲಾಕೃತಿಗಳು, ಅವುಗಳ ರಖೋಲೆ, ಚಿತ್ರಕಲಾವಿದರ ಪರಿಶ್ರಮ, ಕಲಾಕೃತಿಗಳ ರಚನೆಯ ಹಿಂದಿರುವ ಪ್ರೇರಣೆ, ಆಶಯ, ರೇಖೆಗಳು, ವರ್ಣವೈವಿಧ್ಯ, ನೆಳಲು ಬೆಳಕು, ಚಿತ್ರ ಕಲಾಕೃತಿಗಳು ಹಾಗೂ ಛಾಯಾ

ಚಿತ್ರಗಳ ನಡುವಿನ ಹೋಲಿಕೆ ಹಾಗೂ ವ್ಯತ್ಯಾಸಗಳು ಮತ್ತು ಉಡುಪಿಯ ಕಲಾಪರಂಪರೆಯ ಬಗ್ಗೆ ವಿದ್ಯಾರ್ಥಿ ಶಿಕ್ಷಕರಿಗೆ ವಿಶದವಾಗಿ ನಿರೂಪಿಸಿದರು.

ಭೇಟಿ ನೀಡಿದ ವಿದ್ಯಾರ್ಥಿ ಶಿಕ್ಷಕರು ಗ್ಯಾಲರಿಯ ಒಳಗೆ ಒಂದು ಅಪೂರ್ವವಾದ ಕಲಾಲೋಕವೇ ಅನಾವರಣವಾದಂತಾಗಿದೆ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು. ಕಾಲೇಜಿನ ಪ್ರಾಚಾರ‍್ಯರಾದ ಡಾ:ಮಹಾಬಲೇಶ್ವರ ರಾವ್ ಅವರು ಡಾ: ಕಿರಣ್ ಆಚಾರ್ಯ ಹಾಗೂ ಶ್ರೀ ಆಸ್ಟ್ರೋ ಮೋಹನ್ ಅವರಿಗೆ ಪುಸ್ತಕ ಸ್ಮರಣಿಕೆನೀಡಿ ಆಭಾರ ಮನ್ನಿಸಿದರು.

ಡಾ: ಟಿ.ಎಂ.ಎ. ಪೈ ಶಿಕ್ಷಣ ಕಾಲೇಜಿನ ವಾರ್ಷಿಕೋತ್ಸವ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಳೆವಿದ್ಯಾರ್ಥಿ ಸಂಘ ಹಾಗೂ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಈಚೆಗೆ ನೆರವೇರಿತು. ಸಮಾರಂಭದ ಅಧ್ಯಕ್ಷರಾದ ಯಕ್ಷಗಾನ ಸಂಶೋಧಕ ಡಾ: ಕೆ. ಎಂ. ರಾಘವ ನಂಬಿಯಾರ್ ಅವರು “ಶಿಕ್ಷಕ ತಾನು ಕಲಿತದ್ದನ್ನು ಸತ್ಯ ಹಾಗೂ ಪ್ರಾಮಾಣಿಕತೆಯಿಂದ ವಿದ್ಯಾರ್ಥಿಗಳಿಗೆ ಮುಟ್ಟಿಸಿದಾಗ ಸಂರ್ವಾಗೀಣ ಪ್ರಗತಿಯ ಸಮಾಜ ಕಟ್ಟಲು ಸಾಧ್ಯ. ಅಂತಹ ಸಂಕಲ್ಪವನ್ನು ವಿದ್ಯಾರ್ಥಿ ಶಿಕ್ಷಕರು ಇರಿಸಿಕೊಳ್ಳಬೇಕು. ಸರ್ವಸಮಾನತೆಯ ನಾಡನ್ನು ಕಟ್ಟುವ ಕನಸು ಹೊಂದಿರಬೇಕು” ಎಂದು ಕರೆ ನೀಡಿದರು.

ವಾರ್ಷಿಕೋತ್ಸವ ಸಮಾರಂಭzಲ್ಲಿ ಅಭ್ಯಾಗತರಾದ ಮಣಿಪಾಲ ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ಪ್ರಾಧ್ಯಾಪಕರಾದ ಡಾ: ಸತೀಶ್ ರಾವ್ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಗಳಿಸಿದ ಶ್ರೀಮತಿ ಸ್ನೇಹಲ್ ಕೋಟ್ಯಾನ್ ಹಾಗೂ ಚತುರ್ಥ ರ‍್ಯಾಂಕ್ ಗಳಿಸಿದ ವಲಿಟಾ ಪಿ. ಲೋಬೋ ಅವರನ್ನು ಸನ್ಮಾನಿಸಿ “ಜ್ಞಾನದ ಹಸಿವಿದ್ದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಾಧನೆಯ ಪಥದೆಡೆಗೆ ಸಾಗುವ ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡುವಲ್ಲಿ ಶ್ರೇಷ್ಠ ಸಂಸ್ಥೆಯಾಗಿ ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯ ಶ್ಲಾಘನೆಗೆ ಪಾತ್ರವಾಗಿದೆ” ಎಂದು ನುಡಿದರು.

ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಕಾಲೇಜಿನ ವಾರ್ಷಿಕ ವರದಿಯನ್ನು ಹಳೆ ವಿದ್ಯಾರ್ಥಿ ಸಂಘದ ಕಾರ‍್ಯದರ್ಶಿ ಶ್ರೀಮತಿ. ಪ್ರೀತಿ ಎಸ್. ರಾವ್ ಸಂಘದ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಹಳೆವಿದ್ಯಾರ್ಥಿನಿ ವಲಿಟಾ ಪಿ. ಲೋಬೋ ಸನ್ಮಾನ ಸ್ವೀಕರಿಸಿ ಶುಭಾಶಂಸನಗೈದರು. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಪ್ರಜ್ಞಾ ಜೆ. ಅಂಚನ್ ಇನ್ನೂ ಉತ್ತಮ ಸಾಧನೆ ಗೈಯುವ ಆಶಯ ವ್ಯಕ್ತಪಡಿಸಿದರು.

ಉಪನ್ಯಾಸಕಿ ಶ್ರೀಮತಿ. ಉಷಾ ಎಚ್. ಅಭ್ಯಾಗತರನ್ನು ಸ್ವಾಗತಿಸಿ ಪರಿಚಯಿಸಿದರು. ಶ್ರೀಮತಿ ಕುಶಾಲಿನಿ ಸಿ.ಎನ್. ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರೂಪಾ ಕೆ. ಕಾರ‍್ಯಕ್ರಮ ನಿರ್ವಹಣೆ ಮಾಡಿದರು.

ಶಿಕ್ಷಣದಲ್ಲಿ ರಂಗಭೂಮಿ ಕಾರ‍್ಯಾಗಾರ

ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ಒಂದು ದಿನದ ‘ಶಿಕ್ಷಣದಲ್ಲಿ ರಂಗಭೂಮಿ’ ಕಾರ‍್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಯುವ ರಂಗನಿರ್ದೇಶಕ ಶ್ರೀ. ಗಣೇಶ್ ಎಂ. ಸಂಪನ್ಮೂಲ ವ್ಯಕಿಯಾಗಿ ಪಾಲ್ಗೊಂಡಿದ್ದರು.

“ಶಿಕ್ಷಣದಲ್ಲಿ ರಂಗಭೂಮಿ ಎಂಬುದು ಪುಸ್ತಕದಿಂದ ದೂರಸರಿದು, ಶಿಕ್ಷಕರ ನೆಟ್ಟ ನೋಟಗಳಿಂದ ಪಕ್ಕಕ್ಕೆ ಸರಿದು ಕ್ರಿಯೆಯಲ್ಲಿ ಸ್ವತಃ ಪಾಲ್ಗೊಂಡು ಜ್ಞಾನಾನುಭವ ಕೌಶಲಗಳನ್ನು ಗಳಿಸುವ ಒಂದು ಪ್ರಕ್ರಿಯೆ. ಸಹಾಯ, ಸಹಕಾರ, ಅನುಭೂತಿ, ಭಿನ್ನಮತದ ಬಗ್ಗೆ ಸಹಿಷ್ಣುತೆ, ವಿಚಾರ ವಿನಿಮಯ, ವಿಶ್ವಾಸ, ಮೈತ್ರಿ ಮೊದಲಾದ ಮೌಲ್ಯಗಳ ಪ್ರತ್ಯಕ್ಷ ಕಲಿಕೆ ಶಿಕ್ಷಣದಲ್ಲಿ ರಂಗಭೂಮಿಯಿಂದ ಸಾಧ್ಯ. ಪುಸ್ತಕ ಪ್ರಪಂಚದಿಂದ ನಿಜ ಪ್ರಪಂಚದೆಡೆಗೆ ಸಾಗಲು ಇಂಬು ನೀಡುವ ಈ ಪ್ರಕ್ರಿಯೆಯಲ್ಲಿ ಪ್ರವಚನ, ಟಿಪ್ಪಣಿಗಳೇ ಕಲಿಕೆಯಲ್ಲ; ಕಲಿಕೆಗೆ ಹಲವು ಆಸಕ್ತಿದಾಯಕ ಅನುಭವಜನ್ಯ ಮುಖಗಳಿವೆ ಎಂಬ ಬೌದ್ಧಿಕ ಎಚ್ಚರವನ್ನು ಮೂಡಿಸುವ ಪ್ರಕ್ರಿಯೆ” ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ: ಮಹಾಬಲೇಶ್ವರ ರಾವ್ ‘ಶಿಕ್ಷಣದಲ್ಲಿ ರಂಗಭೂಮಿ’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು. ಬಳಿಕ ರಂಗನಿರ್ದೇಶಕ ಗಣೇಶ್ ಎಂ. ಧ್ವನಿಯ ವಿವಿಧ ಸಾಧ್ಯತೆಗಳನ್ನು ಪ್ರಾತ್ಯಕ್ಷಿಕವಾಗಿ ವಿದ್ಯಾರ್ಥಿ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟರಲ್ಲದೆ ‘ಪಾಠನಾಟಕ’ದ ಮಹತ್ವವನ್ನೂ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿ ಶಿಕ್ಷಕರೇ ಅರಿಯುವಂತೆ ಮಾಡಿದರು.

ಇಂಗ್ಲಿಷ್ ಬೋಧನೆ ಆಸಕ್ತಿದಾಯಕವಾಗಲಿ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಬೋಧನ ವಿಭಾಗದ ವಿದ್ಯಾರ್ಥಿ ಶಿಕಕ್ಷರಿಗಾಗಿ ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಪದವಿಪೂರ್ವ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ. ಸೌಮ್ಯಲತಾ ಅವರು ಇಂಗ್ಲಿಷ್ ಬೋಧನೆಯನ್ನು ಆಸಕ್ತಿದಾಯಕವಾಗಿಸಲು ಕಥೆ, ಕವನ, ಹಾಗೂ ಜೀವನ ಚರಿತ್ರೆಗಳಂತಹ ಪ್ರಕಾರಗಳನ್ನು ತರಗತಿಗಳಲ್ಲಿ ಓದಿ ಅರ್ಥೈಸಬೇಕು. ಸರಳವಾಗಿ ಸುಲಲಿತವಾಗಿ ಬರೆಯಲು ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಇಂಗ್ಲಿಷ್ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ‍್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಭಾರತೀಯರು ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಕಾರಣೀಭೂತವಾದದ್ದು ಅವರ ಇಂಗ್ಲಿಷ್ ಭಾಷಾಜ್ಞಾನ. ಇಂಗ್ಲಿಷ್ ಭಾಷೆ ನಮ್ಮ ಪ್ರಾದೇಶಿಕ ಭಾಷೆಗಳ ವಿಕಾಸಕ್ಕೆ ತೊಡಕಾದರೂ ನಾಡಿನ ಕೆಲವು ಹೆಸರಾಂತ ಬರವಣಿಗೆಗಾರರು ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚಿಸಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇಂದು ಇಂಗ್ಲಿಷ್ ಕಲಿಕೆ ಅನಿವಾರ‍್ಯವಾದ ನಿಟ್ಟಿನಲ್ಲಿ, ವಿದ್ಯಾರ್ಥಿ ಶಿಕ್ಷಕರು ಮುಂದೆ ಶಾಲೆಗಳಲ್ಲಿ ಮಕ್ಕಳಿಗೆ ಆ ಭಾಷೆಯನ್ನು ಪರಿಣಾಮಕಾರಿಯಾಗಿ ಬೋಧಿಸಲು ಈಗಿನಿಂದಲೇ ಸತತ ಅಭ್ಯಾಸದಲ್ಲಿ ತೊಡಗಬೇಕು ಎಂದು ಕರೆ ನೀಡಿದರು. ಇಂಗ್ಲಿಷ್ ಬೋಧನ ವಿಧಾನದ ವಿದ್ಯಾರ್ಥಿಗಳು ಚರ್ಚೆ, ಸಂಭಾಷಣೆ, ಹಾಡು, ರೂಪಕ ಹಾಗೂ ಭಾಷಾ ಕ್ರೀಡೆಗಳ ಮೂಲಕ ಇಂಗ್ಲಿಷ್ ಭಾಷಾ ಬೋಧನೆ ಹಾಗೂ ಕಲಿಕೆಯ ವೈಶಿಷ್ಟ್ಯಗಳನ್ನು ಸಭಾಸದರಿಗೆ ಪರಿಚಯಿಸಿದರು.

ವಿದ್ಯಾರ್ಥಿ ಶಿಕ್ಷಕರಾದ ತೃಷ್ಣಾ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಅನುಪಮಾ ಧನ್ಯವಾದವನ್ನಿತ್ತರು. ಹರ್ಷಿತಾ ಕಾರ‍್ಯಕ್ರಮ ನಿರ್ವಹಿಸಿದರು.

ಭಾಷೆ ಹಾಗೂ ಆಲೋಚನೆಯ ನಡುವೆ ಅಂತರ್ ಸಂಬಂಧವಿದೆ.

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಬೋಧನಾ ವಿದ್ಯಾರ್ಥಿ ಶಿಕ್ಷಕರಿಗಾಗಿ ಏರ್ಪಡಿಸಿದ ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಇವರು ಭಾಷಾ ಬೋಧನೆಯನ್ನು ಮಕ್ಕಳ ಸಮೀಪಕ್ಕೆ ಕೊಂಡೊಯ್ದಾಗ ಮಕ್ಕಳು ಓದುವಿಕೆಯಲ್ಲಿ ಆಸಕ್ತಿ ವಹಿಸಿ ಆ ಮೂಲಕ ಸಂಸ್ಕೃತಿಯ ಆಚಾರ ವಿಚಾರಗಳ, ರೀತಿ ನೀತಿಗಳ ಆಳ, ಹರಹು ಸೂಕ್ಷ್ಮತೆಗಳನ್ನು ಅರಿತುಕೊಳ್ಳಲು ಸಾಧ್ಯ. ಭಾಷೆ ಹಾಗೂ ಆಲೋಚನೆಯ ನಡುವೆ ಅಂತರ್ ಸಂಬಂಧವಿದೆ. ಭಾಷಾ ಕಲಿಕೆ ಪರಿಣಾಮಕಾರಿಯಾದಾಗ ಸಾಹಿತ್ಯಾಭಿರುಚಿ ಉಂಟಾಗಿ ಆ ಮೂಲಕ ಜ್ಞಾನದ ವಿಸ್ತಾರವಾಗುತ್ತದೆ. ಆ ನಿಟ್ಟಿನಲ್ಲಿ ಭಾಷಾ ಬೋಧಕರು ಯೋಚಿಸಬೇಕು, ಬೋಧಿಸಬೇಕು ಎಂಬ ಕರೆನೀಡಿದರು.

ಕಾರ‍್ಯಕ್ರಮದ ಅಭ್ಯಾಗತರಾದ ಪರ್ಕಳ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ. ಗ್ರಹಪತಿ ಶಾಸ್ತ್ರಿ ಅಂತರಾಳದಲ್ಲಿ ಭಾಷೆಯ ಬಗೆಗೆ ಅಭಿಮಾನ ಹೊಂದಿ ಬೋಧನೆಯನ್ನು ಆಸಕ್ತಿದಾಯಕವಾಗಿ ಕುತೂಹಲ ಭರಿತವಾಗಿ ಮಾಡಿದಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗುತ್ತದೆ. ವಿದ್ಯಾರ್ಥಿ ಶಿಕ್ಷಕರು ಆ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಶಿಕ್ಷಕರಾದ ರಾಜಶ್ರೀ ಸ್ವಾಗತಿಸಿದರು. ಗೀತಾ ಧನ್ಯವಾದವನ್ನಿತ್ತರು, ಪೃಥ್ವಿರಾಜ್ ಕಾರ್ಯಕ್ರಮ ನಿರ್ವಹಿಸಿದರು.

ನಾವು ಸಿನೆಮಾದ ‘ಓದುಗ’ರಾಗಬೇಕು

“ನಾವು ಸಿನೆಮಾದ ‘ಆಡಿಯನ್ಸ್’ ಆಗಿದ್ದುಕೊಂಡು ನಿರ್ದೇಶಕರು ಉಣಬಡಿಸುವುದನ್ನು ಉಣ್ಣುತ್ತಾ ಬಂದಿದ್ದೇವೆ. ಆದರೆ ಈಗ ನಾವು ಸಿನೆಮಾದ ಓದುಗರಾಗಿ ಅದರ ಚಿತ್ರಕತೆ, ಕ್ಯಾಮರಾ ಚಲನೆ, ದೃಶ್ಯ-ಧ್ವನಿ ಸಂಕಲವನ್ನು ಗಮನಿಸುವ ಮೂಲಕ ಸಿನೆಮಾ ಭಾಷೆಯನ್ನು ಗ್ರಹಿಸುವ ಆವಶ್ಯಕತೆಯಿದೆ. ಹೀಗೆ ಮಾಡಿದಾಗ ಚಲನಚಿತ್ರವೆಂಬುದು ಮನೋರಂಜನಾ ಮಾಧ್ಯಮವಷ್ಟೇ ಅಲ್ಲ ಅದೊಂದು ಗಂಭೀರ ಕಲಾ ಮಾಧ್ಯಮ, ವಿಚಾರಗಳನ್ನು ಬಡಿದೆಬ್ಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವ, ಅನುಭವ ಶೋಧನೆಯ ಮೂಲಕ ಕಲಾನುಭೂತಿ ಒದಗಿಸುವ ಅನನ್ಯ ಭಾಷೆ” ಎಂದು ಉಡುಪಿ ಚಿತ್ರಸಮಾಜದ ಅಧ್ಯಕ್ಷರೂ ಖ್ಯಾತ ವಿಮರ್ಶಕರೂ ಆಗಿರುವ ಪ್ರೊ: ಕೆ. ಫಣಿರಾಜ್ ಈಚೆಗೆ ನುಡಿದರು. ಅವರು ಉಡುಪಿಯ ಡಾ: ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಎರಡನೆಯ ವರ್ಷದ ಬಿ.ಎಡ್ ವಿದ್ಯಾರ್ಥಿ ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ‘ಚಲನಚಿತ್ರ ರಸಗ್ರಹಣ’ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ರಸಗ್ರಹಣದ ವಿವಿಧ ಆಯಾಮಗಳನ್ನು ಪ್ರಸ್ತುತ ಪಡಿಸಿದರು. ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಭಾರತದಲ್ಲಿ ಚಲನಚಿತ್ರ ರಸಗ್ರಹಣಕ್ಕೆ ಸಂಬಂಧಪಟ್ಟಂತೆ ಚಿತ್ರಸಮಾಜಗಳು ಬೆಳೆದು ಬಂದ ಬಗೆ ಹಾಗೂ ಕರ್ನಾಟಕದಲ್ಲಿ ಚಲನಚಿತ್ರ ರಸಗ್ರಹಣ ಸಂಸ್ಕೃತಿ ರೂಪುಗೊಳ್ಳುವಲ್ಲಿ ದಿ: ಸತೀಶ ಬಹಾದುರ್, ದಿ: ಕೆ.ವಿ. ಸುಬ್ಬಣ್ಣ ಹಾಗೂ ಹೆಗ್ಗೋಡಿನ ಅಕ್ಷರ ಪ್ರಕಾಶನ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಮೇದಿನಿ ಕೆಳಮನೆ ನಿರ್ದೇಶನದ ವೈದೇಹಿ ಕತೆ ಆಧಾರಿತ ‘ದಾಳಿ’ ಕಿರುಚಿತ್ರವನ್ನೂ ಪ್ರದರ್ಶಿಸಲಾಯಿತು.

ಸಂಗೀತ ರಸಗ್ರಹಣ ಶಿಬಿರ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಶಿಕ್ಷಣದಲ್ಲಿ ರಂಗಭೂಮಿ ಮತ್ತು ಕಲೆಗಳು’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಗೀತ ರಸಗ್ರಹಣ ಶಿಬಿರವನ್ನು ವಿದ್ಯಾರ್ಥಿ ಶಿಕ್ಷಕರಿಗಾಗಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿ ವಿದುಷಿ ಶ್ರೀಮತಿ. ಉಮಾಶಂಕರಿ ಸಂಗೀತದಲ್ಲಿ ಶ್ರುತಿ, ಲಯ, ತಾಳ, ಅತಿ ಮುಖ್ಯ. ಅವುಗಳ ಅರಿವಿನೊಂದಿಗೆ ಸಂಗೀತವನ್ನು ಅನುಭವಿಸಿ ಭಾವಪೂರ್ಣವಾಗಿ ಹಾಡಬೇಕು ಆಗ ಮಾತ್ರ ಅದರ ಸಾರ್ಥಕ್ಯ ಎಂಬುದಾಗಿ ಹೇಳಿದರು. ಶಿಬಿರದಲ್ಲಿ ಸೋದಾಹರಣವಾಗಿ ಶ್ರುತಿ, ಲಯ, ವಿವಿಧ ತಾಳಗಳು, ವಿವಿಧ ರಾಗಗಳನ್ನು ಪ್ರಾತ್ಯಕ್ಷಿಕವಾಗಿ ಪ್ರಸ್ತುತಪಡಿಸಿ ವರ್ಣ, ಕೃತಿ, ಕೀರ್ತನೆ, ದೇವರ ನಾಮ, ಜನಪದಗೀತೆ ಮುಂತಾದ ಪ್ರಕಾರಗಳನ್ನು ಹಾಡುವ ಕ್ರಮವನ್ನೂ ವಿದ್ಯಾರ್ಥಿ ಶಿಕ್ಷಕರಿಗೆ ನಿರೂಪಿಸಿದರು. ವಿದ್ಯಾರ್ಥಿ ಶಿಕ್ಷಕರು ಉತ್ಸಾಹದಿಂದ ಸಂಪನ್ಮೂಲ ವ್ಯಕ್ತಿಗಳ ಜತೆ ಸಹಕರಿಸಿದರು.

ಕಾಲೇಜಿನ ಪ್ರಾಚಾರ‍್ಯ ಡಾ: ಮಹಾಬಲೇಶ್ವರ ರಾವ್ ಇವರು ವಿದ್ಯಾರ್ಥಿಗಳಲ್ಲಿ ಕಲಾಭಿಜ್ಞತೆ ಮೂಡಬೇಕು ಎಂಬ ಕಾರಣದಿಂದ ಶಿಕ್ಷಣದಲ್ಲಿ ರಂಗಭೂಮಿ ಮತ್ತು ಕಲೆಗಳು ಎಂಬ ವಿಷಯವನ್ನು ನೂತನ ಬಿ.ಎಡ್ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ಆದುದರಿಂದ ಅದರ ಮಹತ್ವವನ್ನು ಅರಿತು ವಿದ್ಯಾರ್ಥಿ ಶಿಕ್ಷಕರು, ಕಲೆಗಳನ್ನು ಅಭ್ಯಸಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಶಿಬಿರದ ಕೊನೆಯಲ್ಲಿ ವಿದ್ಯರ್ಥಿ ಶಿಕ್ಷಕರಾದ ಶ್ರೀಮತಿ ಸುಪ್ರಿಯಾ ಶೆಟ್ಟಿ, ಕುಮಾರಿ ವಂದನಾ ನಾಯಕ್ ಹಾಗೂ ಶ್ರೀ. ಶ್ರೀಧರ ಭಿರಡಿ ತಮ್ಮ ಅನುಭವಗಳನ್ನು ನಿರೂಪಿಸಿದರು.

ಕವಿ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವ ಕಾರ‍್ಯಕ್ರಮದ ಮುಖ್ಯ ಅತಿಥಿಗಳಾದ ಖ್ಯಾತ ವಿಮರ್ಶಕ ಶ್ರೀ. ಜಿ. ರಾಜಶೇಖರ ಅವರು ಅಡಿಗರ ಕಾವ್ಯದಲ್ಲಿ ವಾಸ್ತವದ ನೆಲೆಯಲ್ಲಿ ಆದರ್ಶ ಕಾಣುವ ರೀತಿ, ಅನುಭವವನ್ನು ವಿಶ್ಲೇಷಿಸಿ, ಪರಿಶೀಲಿಸಿ ತನ್ನದಾಗಿಸುವ ರೀತಿ ವಿಶಿಷ್ಟ. ಪ್ರತಿಯೊಂದು ಪದ, ವಾಕ್ಯ ಪ್ರಯೋಗವೇ ಭಿನ್ನವಾದ ಅನುಭವ ನೀಡುತ್ತದೆ. ಅಂತಹ ಕವಿ ಶ್ರೇಷ್ಠರ ಕಾವ್ಯವನ್ನು ಅನುಭವದ ಹಿನ್ನೆಲೆಯಲ್ಲಿ ಮಾತ್ರ ವಿಶ್ಲೇಷಿಸಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಅಡಿಗರ ಕಾವ್ಯದ ವೈಶಿಷ್ಟ್ಯಗಳನ್ನು ಅರಿತುಕೊಂಡು ಹೊಸ ರೀತಿಯಲ್ಲಿ ಓದುವ ಮನಸ್ಸು ಮಾಡಬೇಕು ಎಂದು ಕರೆ ಕೊಟ್ಟರು. ಆದರ್ಶ, ವಾಸ್ತವ, ಭೂಮಿ-ಆಕಾಶ, ಕನಸುಗಾರಿಕೆ ಯಥಾರ್ಥಗಳ ಸಂಘರ್ಷ ಅಡಿಗರ ಕಾವ್ಯದ ಮುಖ್ಯ ಭೂಮಿಕೆ ಎಂದರಲ್ಲದೆ ಅವರ ಕೆಲವು ಜನಪ್ರಿಯ ಕವಿತೆಗಳನ್ನು ರಾಗವಾಗಿ ಹಾಡಿ ಕವಿಯ ಮೂಲ ಆಶಯಕ್ಕೆ ಧಕ್ಕೆ ತರಲಾಗುತ್ತಿದೆ. ಈ ಕವಿತೆಗಳಲ್ಲಿ ಕಂಡುಬರುವ ದಟ್ಟವಾದ ವ್ಯಂಗ್ಯವನ್ನು ಹಾಡುಗಾರರು, ಓದುಗರು ಗುರುತಿಸದೇ ಇರುವುದು ಒಂದು ಅಪಚಾರ. ಅಡಿಗರ ಕಾವ್ಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡದಿರುವುದು ಇದಕ್ಕೆ ಕಾರಣ ಎಂದು ನುಡಿದರು.

ಕಾರ‍್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯ ಡಾ: ಮಹಾಬಲೇಶ್ವರ ರಾವ್ ಅಡಿಗರ ಕಾವ್ಯದ ವಿಶೇಷತೆಗಳೇ ಸಂಕ್ಷಿಪ್ತ ಪರಿಣಾಮಕಾರಿ ಅಭಿವ್ಯಕ್ತಿ. ವ್ಯಕ್ತಿ ವಿಶಿಷ್ಟ ಪ್ರತಿಪಾದನೆ, ಪ್ರತಿಮಾತ್ಮಕತೆ, ಭಗ್ನತೆಯ ಪ್ರತಿಮೆಗಳು ಹಾಗೂ ಪರಂಪರೆ ಹಾಗೂ ಆಧುನಿಕತೆಯ ಸಂಘರ್ಷ. ಅಂತಹ ಮಹಾನ್ ಕವಿಯ ಸಾಹಿತ್ಯವನ್ನು ವಿದ್ಯಾರ್ಥಿ ಶಿಕ್ಷಕರೆಲ್ಲ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದರು.

ಶ್ರೀಮತಿ ಕುಶಾಲಿನಿ ಸಿ.ಎನ್. ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಉಷಾ ಅತಿಥಿಗಳಿಗೆ ಪುಷ್ಪ ಹಾಗೂ ಸ್ಮರಣಿಕೆ ನೀಡಿದರು. ಶ್ರೀಮತಿ ಪ್ರೀತಿ ಎಸ್. ರಾವ್ ಧನ್ಯವಾದವನ್ನಿತ್ತರು. ಶ್ರೀಮತಿ ಮಮತಾ ಸಾಮಂತ್ ಕಾರ‍್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಶಿಕ್ಷಕರು ಅಡಿಗರ ಜನಪ್ರಿಯ ಕವನಗಳನ್ನು ಹಾಡಿದರು. ಅಡಿಗರ ‘ನನ್ನ ಅವತಾರ’ ಮತ್ತು ‘ವರ್ಧಮಾನ’ ಕವನಗಳ ವಾಚನಗಳನ್ನು ಮಾಡಲಾಯಿತು.

ಮನದಾಳದ ಸ್ವಾಗತ

ಡಾ: ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸಕ್ತ ವರ್ಷದ ವಿದ್ಯಾರ್ಥಿಗಳನ್ನು ತೃತೀಯ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಸ್ವಾಗತಿಸುವ ಒಂದು ವಿಶಿಷ್ಟ ಕಾರ್ಯಕ್ರಮ ನೆರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಡಾ: ಮಹಾಬಲೇಶ್ವರ ರಾವ್ ‘ಬಿ.ಎಡ್ ವ್ಯಾಸಂಗ ಎಂಬುದು ನಿರಂತರ ಅಧ್ಯಯನ ಮತ್ತು ಮುಂದೆ ಶಿಕ್ಷಕರಾಗಲಿರುವವರಿಗೆ ತಮ್ಮನ್ನು ತೊಡಗಿಸಿಕೊಳ್ಳುವುದರ ಜೊತೆಗೆ ಮಕ್ಕಳನ್ನು ಶಿಕ್ಷಣದ ಮೂಲೋದ್ದೇಶವಾದ ಪರಿಪೂರ್ಣ ಬೆಳವಣಿಗೆಯತ್ತ ಕೊಂಡೊಯ್ಯಲು ಇದು ಸಹಕಾರಿ. ಇದನ್ನು ಅರಿತುಕೊಂಡು ವಿದ್ಯಾರ್ಥಿ ಶಿಕ್ಷಕರೆಲ್ಲಾ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಎಂದು ಕರೆಕೊಟ್ಟರು.

ಅನಂತರ ವಿದ್ಯಾರ್ಥಿ ಶಿಕ್ಷಕರಿಂದ ಬಿ.ಎಡ್ ವ್ಯಾಸಂಗದ ಮಹತ್ವವನ್ನು ಕುರಿತ ಕಿರು ಪ್ರಹಸನ, ವಿವಿಧ ರೀತಿಯ ಆಟಗಳು, ಯೋಗ, ನೃತ್ಯ ಮುಂತಾದ ಮನೋರಂಜನಾತ್ಮಕ ಕಾರ್ಯಕ್ರಮಗಳು ಮೂಡಿ ಬಂದವು. ವಿದ್ಯಾರ್ಥಿ ಶಿಕ್ಷಕರಾದ ಕು: ಅಕ್ಷತಾ ಅಮೀನ್ ಸ್ವಾಗತಿಸಿದರು. ಕು: ಚೈತ್ರಾ ಧನ್ಯವಾದವನ್ನಿತ್ತರು. ರೋಲ್ವಿನ್ ಅರಾನ್ಹಾ ಕಾರ್ಯಕ್ರಮ ನಿರೂಪಿಸಿದರು.

ಗುಣಾತ್ಮಕ ಶಿಕ್ಷಣದ ಪರಿಕಲ್ಪನೆ

ಡಾ: ಟಿ. ಎಂ .ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಶಿಕ್ಷಕರಿಗಾಗಿ ಗುಣಾತ್ಮಕ ಶಿಕ್ಷಣ ಎಂಬ ವಿಷಯವನ್ನು ಕುರಿತಾಗಿ ಅಭಿಪ್ರಾಯ ಮಂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಭಾಗವಹಿಸಿದ ಹಲವಾರು ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣವೆಂದರೆ ಕೇವಲ ಶಾಲೆಯ ಬಾಹ್ಯ ರಚನೆಯಲ್ಲ ಸುವ್ಯವಸ್ಥಿತವಲ್ಲ, ಪೀಠೋಪಕರಣಗಳಲ್ಲ; ಬದಲಿಗೆ ಕಲಿಕೆಗೆ ಪೂರಕವಾದ ವಾತಾವರಣ, ಸ್ವಕಲಿಕೆಗೆ ಚಿಂತನೆಗೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಗೆ, ಅನ್ವೇಷಣೆ ಹಾಗೂ ವಿಶ್ಲೇಷಣೆಗೆ ಅವಕಾಶ ನೀಡಬೇಕು. ಸವಲತ್ತುಗಳು ಗುಣಾತ್ಮಕ ನಿರ್ಧಾರಕಗಳಲ್ಲ; ಬದಲಿಗೆ ಅಧ್ಯಾಪಕರ ನಿಷ್ಠೆ, ಸಮರ್ಪಣಾಭಾವ, ಮಾಹಿತಿ ಹಾಗೂ ತಂತ್ರಜ್ಞಾನದ ಬಳಕೆ ಗುಣಮಟ್ಟ ನಿರ್ಧರಿಸುವ ಅಂಶಗಳಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ‍್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಕುಶಾಲಿನಿಯವರು ತಾರತಮ್ಯವಿಲ್ಲದ, ಸಂಶೋಧನೆಗಳಿಗೆ ಹೆಚ್ಚು ಅವಕಾಶ ನೀಡುವ, ಶಾಂತಿ ಹಾಗೂ ಸೌಹಾರ್ದ ವಾತಾವರಣವನ್ನು ಸೃಷ್ಟಿಸುವ, ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣವೇ ಗುಣಾತ್ಮಕ ಶಿಕ್ಷಣ. ಅಂತಹ ಚಿಂತನೆಯ ಕಡೆಗೆ ನೀವು ಸಾಗಬೇಕು ಎಂಬುದಾಗಿ ವಿದ್ಯಾರ್ಥಿ ಶಿಕ್ಷಕರಿಗೆ ಕರೆ ನೀಡಿದರು. ವಿದ್ಯಾರ್ಥಿ ಶಿಕ್ಷಕರಾದ ಕು: ಸ್ನೇಹಲತಾ ಅತಿಥಿಗಳನ್ನು ಸ್ವಾಗತಿಸಿದರು, ಕು: ಅಮೃತಾ ಧನ್ಯವಾದವನ್ನಿತ್ತರು. ಕು: ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು. 
   
 ಮಂಗಳೂರು ವಿಶ್ವವಿದ್ಯಾನಿಲಯ 2014-15ನೇ ಸಾಲಿನಲ್ಲಿ ನಡೆಸಿದ ಬಿ.ಎಡ್ ವಾರ್ಷಿಕ ಪರೀಕ್ಷೆಯಲ್ಲಿ  ರ‍್ಯಾಂಕ 
    
 ಶ್ರೀಮತಿ. ಸ್ನೇಹಲ್ ಕೋಟ್ಯಾನ್,           ಕುಮಾರಿ  ವೆಲಿಟಾ ಪಿ. ಲೋಬೊ  ಎರಡನೇ ರ‍್ಯಾಂಕ್‌      ನಾಲ್ಕನೆಯ ರ‍್ಯಾಂಕ

ಕನ್ನಡ ಸಾಹಿತ್ಯ ಪರಿಷತ್ತಿನ ಡಾ: ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರ

ಡಾ: ಮಹಾಬಲೇಶ್ವರ ರಾವ್ ರಚಿಸಿದ ‘ಹೆತ್ತವರೇ, ಮಕ್ಕಳ ಬಗ್ಗೆ ಕಾಳಜಿ ವಹಿಸಿ’ ಗ್ರಂಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಡಾ: ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರವನ್ನು ಈಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಮುಖ್ಯ ಅಪರಕಾರ‍್ಯದರ್ಶಿ ಹಾಗೂ ಚಿಂತಕ ಶ್ರೀಚಿರಂಜೀವಿ ಸಿಂಗ್ ವಿತರಣೆಮಾಡಿದರು.

ಪ್ರೊ: ಟಿ. ವಿಶ್ವನಾಥ್ ಸಂಸ್ಮರಣ ಉಪನ್ಯಾಸ

ಡಾ: ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಕಾಲೇಜಿನ ಪೂರ್ವ ಪ್ರಾಚಾರ‍್ಯರಾದ ದಿ: ಪ್ರೊ: ಟಿ. ವಿಶ್ವನಾಥ್ ಅವರ ಸಂಸ್ಮರಣಾರ್ಥ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಪ್ತ ಸಲಹೆಗಾರರು ಮತ್ತು ಮನೋಚಿಕಿತ್ಸಕರು ಆದ ಶ್ರೀಮತಿ. ತನುಜ ಮಾಬೆನ್ ಅವರು “ನರಭಾಷಿಕ ಕಾರ‍್ಯಕ್ರಮೀಕರಣ” ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಶ್ರೀಮತಿ ತನುಜ ಮಾಬೆನ್ ಅವರು ಈ ಸಂದರ್ಭದಲ್ಲಿ ಮಾತನಾಡಿ ನರಭಾಷಿಕ ಕಾರ‍್ಯಕ್ರಮೀಕರಣದ ಇತಿಹಾಸ, ಅದರ ಬೆಳವಣಿಗೆ, ವಿವಿಧ ಮಜಲುಗಳನ್ನು ವಿವರಿಸಿದರು ವಿದ್ಯಾರ್ಥಿಗಳ ಸುಪ್ತ ಮನಸ್ಸಿನಲ್ಲಿ ಅಚ್ಚಾಗಿರುವ ಚಿತ್ರ, ಅನುಭವಗಳನ್ನು ಬದಲಾಯಿಸಿದಾಗ ಮಾತ್ರ ಅವರಲ್ಲಿ ನಿರೀಕ್ಷಿತ ದಕ್ಷತೆ, ಕೌಶಲ ಮತ್ತು ಆತ್ಮ ವಿಶ್ವಾಸವನ್ನು ಮೂಡಿಸುವುದು ಸಾಧ್ಯ. ಈ ದಿಸೆಯಲ್ಲಿ ನರಭಾಷಿಕ ಕಾರ‍್ಯಕ್ರಮೀಕರಣ ವಿದ್ಯಾರ್ಥಿಗಳ ಮನಸ್ಸನ್ನು ಪುನರ್ವಿನ್ಯಾಸಗೊಳಿಸುವಲ್ಲಿ ಹೇಗೆ ಸಹಕರಿಸುವುದು ಎಂಬುದನ್ನು ಮತ್ತು ಸ್ವಗತ, ಸಂವಹನಗಳ ಮಹತ್ವ ಮತ್ತು ಗುರಿಯ ಆವಶ್ಯಕತೆಗಳನ್ನು ಚಟುವಟಿಕೆಗಳೊಂದಿಗೆ ವಿವರಿಸಿದರು.

ಆಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ ಮನೋವಿಜ್ಞಾನದ ಎಲ್ಲ ಶಾಖೆಗಳ ಬಗ್ಗೆ ಟೀಕೆಗಳಿರುವಂತೆ ನರಭಾಷಿಕ ಕಾರ‍್ಯಕ್ರಮೀಕರಣ ಬಗ್ಗೆಯೂ ಟೀಕೆಗಳಿವೆ. ನಾವು ಶಿಕ್ಷಣ ಕ್ಷೇತ್ರದಲ್ಲಿರುವವರು ಎಲ್ಲ ಶಾಸ್ತ್ರಗಳ ಒಳಿತನ್ನು ಸಂಯೋಜಿಸಿ ನಮ್ಮದೇ ಆದ ಸಮನ್ವಯ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು. ಮನಸ್ಸಿಗೆ ಧನಾತ್ಮಕ ಆಲೋಚನೆಯನ್ನು ಕೊಟ್ಟುಕೊಂಡು ನಮ್ಮಲ್ಲಿ ಅಂತಸ್ಥವಗಿರುವ ಸಾಮರ್ಥ್ಯವನ್ನು ಪೂರ್ಣಪ್ರಮಾಣದಲ್ಲಿ ವಿಕಸಿತಗೊಳಿಸುವುದು ಹೇಗೆ ಎನ್ನುವುದನ್ನು ನರಭಾಷಿಕ ಕಾರ‍್ಯಕ್ರಮೀಕರಣ ತಿಳಿಸಿಕೊಡುತ್ತದೆ. ಶಿಕ್ಷಕರಾಗಿ ವಿದ್ಯಾರ್ಥಿಯ ವರ್ತನೆಯಲ್ಲಿ ಪರಿವರ್ತನೆ ತರುವುದಕ್ಕೆ ಈ ಬಗೆಯನ್ನು ಬಳಸುವತ್ತ ಆಲೋಚಿಸಿ ಎಂದರು.

ಉಪನ್ಯಾಸಕಿ ಶ್ರೀಮತಿ ಪ್ರೀತಿ ಎಸ್. ರಾವ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀಮತಿ ಕುಶಾಲಿನಿ ಸಿ.ಎನ್ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರೂಪಾ ಕೆ. ಅವರು ಕಾರ‍್ಯಕ್ರಮ ನಿರ್ವಹಿಸಿದರು.

ಗಣಿತದ ಮೂಲಕ ಮೌಲ್ಯದ ಶಿಕ್ಷಣ

ಡಾ: ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಣಿತ ವಿಭಾಗದ ವಿದ್ಯಾರ್ಥಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಕಾರ‍್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಣಿಪಾಲದ ಮಾಧವ ಕೃಪಾ ಪ್ರಾಥಮಿಕ ಶಾಲೆಯ ಅಧ್ಯಾಪಕಿ ಶ್ರೀಮತಿ ಶೈಜಾ ಬಾಯಿರಿ ಆನಂದಕ್ಕಾಗಿ ಗಣಿತ ಕಲಿಕೆ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸುತ್ತಾ ಪ್ರಕೃತಿಯ ಮಡಿಲಲ್ಲಿ ಅಡಕವಾಗಿರುವ ಗಣಿತವನ್ನು ಮಕ್ಕಳಿಗೆ ಪರಿಚಯಿಸುತ್ತಲೆ ತರಗತಿಯ ಗಣಿತ ಪಾಠಗಳು ನಡೆಯಬೇಕು. ಆಗ ಕಲಿಕೆ ಹೃದಯಾಂತರಾಳದಲ್ಲಿ ಮೂಡಿ ಗಣಿತವನ್ನು ಆನಂದದಿಂದ ಕಲಿಯಬಹುದು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಜೀವನಕ್ಕೂ ಗಣಿತಕ್ಕೂ ಅವಿನಾಭಾವ ಸಂಬಂಧವಿದೆ. ಮಕ್ಕಳಿಗೆ ಗಣಿತದ ಬೋಧನೆ ಅಂತರ್‌ಜ್ಞಾನ, ಅಂತರ್ ಸೃಷ್ಠ್ಠಿಯನ್ನು ವಿವೇಚಿಸುವಲ್ಲಿ ಸಹಕಾರಿಯಾಗಬೇಕು. ಮಕ್ಕಳು ಗಣಿತವೆಂದರೆ ಭಯವಿಲ್ಲದೆ ಪ್ರಕೃತಿಯಲ್ಲಿ ಅಡಗಿರುವ ಗಣಿತೀಯ ವಿನ್ಯಾಸಗಳೊಂದಿಗೆ ಕಲಿಯುವುದರ ಜೊತೆಗೆ ಮೌಲ್ಯದ ಪ್ರತಿಪಾದನೆಯನ್ನು ಗಣಿತ ಬೋಧನೆ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರು ಚಿಂತಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಶಿಕ್ಷಕರಾದ ಕು: ಅಶ್ವಿನಿ ಅತಿಥಿಗಳನ್ನು ಸ್ವಾಗತಿಸಿದರು. ಅಕ್ಷತಾ ಅತಿಥಿಗಳನ್ನು ಪರಿಚಯಿಸಿದರು. ಕು: ಸವಿತಾ ಧನ್ಯವಾದವನ್ನಿತ್ತರು. ದೀಪಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಸ್ವಾತಂತ್ರ್ಯದ ಹಣತೆ ಸದಾ ಉರಿಯುವ ಚಿಂತನಶೀಲ ಯಾತ್ರೆ.

ಡಾ: ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲುದಲ್ಲಿ ಸಮಾಜ ವಿಜ್ಞಾನ ವಿದ್ಯಾರ್ಥಿ ಶಿಕ್ಷಕರಿಗಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಹಿಳಾ ಕಾಲೇಜು, ಅಜ್ಜರಕಾಡು ಇಲ್ಲಿಯ ಇತಿಹಾಸ ವಿಭಾಗದ ಪ್ರೊ: ಡಾ: ಭಾಸ್ಕರ ಶೆಟ್ಟಿಯವರು ‘ಸ್ವಾತಂತ್ರ್ಯ ೭೦’ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸ್ವಾತಂತ್ರ್ಯ ಎಂಬುವುದು ಸಮಾನತೆ, ಭಾತೃತ್ವ, ಜಾತ್ಯಾತೀತ ಮನೋಭಾವವನ್ನು ಕಟ್ಟಿ ಬೆಳೆಸಿದಾಗ ಅದು ಅರ್ಥಪೂರ್ಣ. ಅಂತಹ ಅರಿವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಪ್ರಯತ್ನಿಸಬೇಕು ಎಂಬುವುದಾಗಿ ವಿದ್ಯಾರ್ಥಿ ಶಿಕ್ಷಕರಿಗೆ ಕರೆ ನೀಡಿದರು.

ಕಾರ‍್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್‌ರವರು ಜೀವನದ ಮೂಲ ಉದ್ದೇಶಗಳಾದ ಆಹಾರ, ವಸ್ತ್ರ, ವಸತಿಯ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಸ್ವಾತಂತ್ರ್ಯಕ್ಕೆ ಅರ್ಥವೆಲ್ಲಿ? ದಾಸ್ಯದಿಂದ ಬಿಡಿಸಿಕೊಂಡು ಹೊಸ ರೀತಿಯಲ್ಲಿ ಚಿಂತನೆಗಳನ್ನು ಬೆಳೆಸಿಕೊಳ್ಳುವ ವೈಚಾರಿಕ ಸ್ವಾತಂತ್ರ್ಯ ಬರಬೇಕು. ಸ್ವಾತಂತ್ರ್ಯದ ಹಣತೆ ಅದು ಸದಾ ಉರಿಯುವ ಚಿಂತನಶೀಲ ಯಾತ್ರೆ. ವಿದ್ಯಾರ್ಥಿ ಶಿಕ್ಷಕರು ಮುಂದಿನ ಜನಾಂಗದ ಮಕ್ಕಳಲ್ಲಿ ಅಂತಹ ವೈಚಾರಿಕ ಪ್ರಜ್ಞೆಯನ್ನು ಬೆಳೆಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಶಿಕ್ಷಕರಾದ ಕು. ಮಲ್ಲ್ಲಿಕಾ ಅತಿಥಿಗಳನ್ನು ಸ್ವಾಗತಿಸಿದರು. ಕು: ವೃಂದಾ ಅತಿಥಿಗಳನ್ನು ಪರಿಚಯಿಸಿದರು. ಮಾ: ಸುದರ್ಶನ್ ಅಡಿಗ ಅತಿಥಿಗಳನ್ನು ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀಮತಿ ಸುಮಾ ಧನ್ಯವಾದವನ್ನಿತ್ತರು. ಕು: ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

ಪುಂಡಲೀಕ ಶೆಣೈ ಸಂಸ್ಮರಣೆ ಮತ್ತು ಗುರುನಮನ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಳೆವಿದ್ಯಾರ್ಥಿ ಸಂಘ ಹಾಗೂ ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಸಹಯೋಗದೊಂದಿಗೆ ‘ಗುರುನಮನ’ ಕಾರ್ಯಕ್ರಮ ನೆರವೇರಿತು.

ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ನಿರ್ದೇಶಕರಾದ ಶ್ರೀ. ವಿದ್ಯಾವಂತ ಆಚಾರ್ಯರು ದೀಪ ಬೆಳಗಿ ಟ್ರಸ್ಟ್‌ನ ಕಾರ‍್ಯಕ್ರಮಗಳನ್ನು ಉದ್ಘಟಿಸುತ್ತಾ ಪುಂಡಲೀಕ ಶೆಣೈಯಂತಹ ಮಹಾನ್ ಶಿಕ್ಷಕರ ವೃತ್ತಿನಿಷ್ಠೆ ನಮ್ಮ ಯುವ ಜನತೆಯಲ್ಲೂ ಮೂಡಿಬರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಉಡುಪಿಯ ‘ಸುಹಾಸಂ’ನ ಅಧ್ಯಕ್ಷರಾದ ಶ್ರೀ. ಶಾಂತರಾಜ ಐತಾಳ್‌ರವರು ಶಿಕ್ಷಕರಾಗಿದ್ದ ಪುಂಡಲೀಕ ಶೆಣೈಯವರ ಅವಿರತ ದುಡಿಮೆಯ ಹಿಂದಿದ್ದ ಶಿಕ್ಷಣದ ಚಿಂತನೆ, ತುಡಿತ ಹಾಗೂ ಕಳಕಳಿಯನ್ನು ಸ್ಮರಿಸಿದರು. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಿವೃತ್ತ ಶಿಕ್ಷಕರಾದ ಶ್ರೀ ಶ್ರೀನಿವಾಸ ಬಲ್ಲಾಳ್ ಹಾಗೂ ಶ್ರೀಧರ್ ಭಟ್ ರವರನ್ನು ಸಮ್ಮಾನಿಸಿದ ಪುಂಡಲೀಕ ಶೆಣೈ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ. ಹರೀಶ್ ಪಿ. ಶೆಣೈಯವರು ಟ್ರಸ್ಟ್‌ನ ಸ್ಥಾಪನೆ ಮತ್ತು ಉದ್ದೇಶಗಳ ವಿವರ ನೀಡಿದರು.

ಕಾರ‍್ಯಕ್ರಮದ ಅಧ್ಯಕ್ಷರಾಗಿದ್ದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್‌ರವರು ಉಡುಪಿಯಲ್ಲಿ ಹಲವಾರು ಶಿಕ್ಷಕ ದಿಗ್ಗಜರುಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದದ್ದು. ಅವರ ಅವಿರತ ಶ್ರಮ, ಪ್ರಾಮಾಣಿಕತನ ಹಾಗೂ ವೃತ್ತಿನಿಷ್ಠೆ ಅನನ್ಯ. ನಿವೃತ್ತ ಶಿಕ್ಷಕರನ್ನು ಸಂಮಾನಿಸುವಾಗ, ಸ್ಮರಿಸುವಾಗ ಶಿಕ್ಷಕರು ಅಳಿದರೂ ಉಳಿಸಿದ ಹೆಜ್ಜೆ ಗುರುತುಗಳೇನು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ರಾಜ ಆಳ್ವಿಕೆಯಲ್ಲಿರುವವರೆಗೆ, ರಾಜಕಾರಣಿಗಳು ಅಧಿಕಾರದಲ್ಲಿರುವವರೆಗೆ ಮಾತ್ರ ಗೌರವ, ಕೀರ್ತಿಗೆ ಪಾತ್ರರಾದರೆ ಶಿಕ್ಷಕರು ಸರ್ವಕಾಲಕ್ಕೂ ಪೂಜನೀಯರು. ಸರ್ವಶಿಕ್ಷಾ ಅಭಿಯಾನ ಫಲಿತಾಂಶ ಕೇಂದ್ರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು ಮೂಲ ಕೌಶಲಗಳನ್ನು ಕಡೆಗಣಿಸಿದೆ. ಇದರಿಂದಾಗಿ ಮೌಲ್ಯಯುತ ಶಿಕ್ಷಣ ಎಂಬ ಕೂಗು ಅರ್ಥಹೀನ. ಆದ್ದರಿಂದ ಸರ್ಕಾರ ಎಚ್ಚತ್ತುಕೊಂಡು ಶಿಕ್ಷಣ ಕ್ಷೇತ್ರದ ಲೋಪದೋಷಗಳನ್ನು ತ್ವರಿತವಾಗಿ ಸರಿಪಡಿಸದಿದ್ದಲ್ಲಿ ಅಪಾಯ ಕಟ್ಟಿಟ್ಟದ್ದು ಎಂಬ ಕಳಕಳಿಯನ್ನು ವ್ಯಕ್ತಪಡಿಸಿದರು.

ಉಪನ್ಯಾಸಕಿ ಶ್ರೀಮತಿ. ಉಷಾ. ಎಚ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಉಪನ್ಯಾಸಕಿ ಶ್ರೀಮತಿ ಪ್ರೀತಿ ಎಸ್. ರಾವ್ ಕೃತಜ್ಞತೆ ಸಲ್ಲ್ಲಿಸಿದರು. ಉಪನ್ಯಾಸಕಿ ಶ್ರೀಮತಿ. ಮಮತಾ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶ್ರೀಮತಿ.ಕುಶಾಲಿನಿ ಸಿ.ಎನ್. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಡಾ: ಟಿ.ಎಂ.ಎ.ಪೈ ಶಿಕ್ಷಣ ಕಾಲೇಜು, ಉಡುಪಿ,

ಹಳೆ ವಿದ್ಯಾರ್ಥಿ ಸಂಘ

ಮತ್ತು

ಪುಂಡಲೀಕ ಶೆಣೈ ಮೆಮೋರಿಯಲ್ ಟ್ರಸ್ಟ್‌ನ

ಸಹಯೋಗದಲ್ಲಿ

‘ಗುರುನಮನ’ ಕಾರ್ಯಕ್ರಮ  

ದಿನಾಂಕ: 01-09-2016 ಅಪರಾಹ್ನ 2.45ಕ್ಕೆ

ಮಾಧವ ಮಂದಿರದಲ್ಲಿ

ಅಭ್ಯಾಗತರು: ಶ್ರೀ ಎಚ್. ಶಾಂತರಾಜ ಐತಾಳ್

ಸಂಮಾನ: ಶ್ರೀ ಎಂ. ಶ್ರೀನಿವಾಸ ಬಲ್ಲಾಳ, ನಿವೃತ್ತ ಶಿಕ್ಷಕರು

ಶ್ರೀ. ಕೆ. ಶ್ರೀಧರ ಭಟ್, ನಿವೃತ್ತ ಶಿಕ್ಷಕರು

ಕಾಲೇಜಿನ ಪೂರ್ವ ವಿದ್ಯಾರ್ಥಿಗಳು ತಮಗೆ ನಲ್ಮೆಯ ಸ್ವಾಗತ

ಹರೀಶ್.ಪಿ. ಶೆಣೈ                       ಯು.ವಿದ್ಯಾವಂತ ಆಚಾರ್ಯ                              ಡಾ: ಮಹಾಬಲೇಶ್ವರ ರಾವ್

ಅಧ್ಯಕ್ಷರು                       ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು                           ಪ್ರಾಚಾರ್ಯರು

              ಪುಂಡಲೀಕ ಶೆಣೈ ಮೆಮೋರಿಯಲ್ ಟ್ರಸ್ಟ್  

ವಿದ್ಯಾರ್ಥಿ ಶಿಕ್ಷಕ ವೃಂದ,

ಬೋಧಕ ಬೋಧಕೇತರ ವೃಂದ

ಶೈಕ್ಷಣಿಕ ವಿಡಿಯೋಚಿತ್ರ ಪ್ರದರ್ಶನ

ಗ್ರಾಮಾಂತರ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜನಪರ ಅಭಿವೃಧ್ಧಿಕಾರ್ಯಕ್ರಮಗಳಲ್ಲಿ ಅಧಿಕಾರಶಾಹಿಯ ಹಸ್ತಕ್ಷೇಪವನ್ನು ಮಿತಿಗೊಳಿಸಿ ಜನತೆಯ ಕೈಗೆ ಅಧಿಕಾರ ಕೊಟ್ಟಲ್ಲಿ ಜನ ತಮ್ಮ ವ್ಯವಹಾರಗಳನ್ನು ಚೆನ್ನಾಗಿ ನಿಭಾಯಿಸಬಲ್ಲರು; ‘ಜನಾಧಿಕಾರ’ ಮೂಲಕ ಗ್ರಾಮಗಳ ಪ್ರಾಕೃತಿಕ ಸಂಪತ್ತನ್ನು ಸಂರಕ್ಷಣೆ ಮಾಡಲು ಸಾಧ್ಯ ಎಂಬ ಸಂದೇಶವನ್ನು ಬಿಂಬಿಸುವ ‘ದ ವಿಲೇಜ್ ರಿಪಬ್ಲಿಕ್’ ಎಂಬ ವಿಡಿಯೋ ಚಿತ್ರವನ್ನು ಈಚೆಗೆ ಉಡುಪಿಯ ಡಾ: ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನಲ್ಲಿ ಪ್ರದರ್ಶಿಸಲಾಯಿತು. ಈ ಚಿತ್ರಕ್ಕೆ ಪೂರಕವೆಂಬಂತೆ ಒಂದು ಕಾಲಕ್ಕೆ ಕುಗ್ರಾಮವೆನಿಸಿದ್ಧ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಅಭಿವೃದ್ಧಿಯಲ್ಲಿ ಕವಿ ಮುದ್ದಣ ಮಿತ್ರಮಂಡಳಿಯ ಪಾತ್ರ ಹಾಗೂ ನಂದಳಿಕೆ ಬಾಲಚಂದ್ರರಾಯರ ಜೀವನ ಗಾಥೆಯನ್ನು ಒಳಗೊಂಡ ‘ಕವಿಯೂರ ಛಲಗಾರ’ ಎಂಬ ವಿಡಿಯೋ ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ; ಮಹಾಬಲೇಶ್ವರ ರಾವ್ ವಿದ್ಯಾರ್ಥಿ ಶಿಕ್ಷಕರಿಗೆ ಪ್ರದರ್ಶನ ಪೂರ್ವ ಹಾಗೂ ಪ್ರದರ್ಶನ್ನೋತ್ತರ ಮಾಹಿತಿಯನ್ನು ಒದಗಿಸಿದರು. ಶ್ರೀ.ದಯಾನಂದ ಪ್ರಭು ಚಿತ್ರ ಪ್ರದರ್ಶನದಲ್ಲಿ ಸಹಕಾರ ನೀಡಿದರು.

ಅನುತ್ತೀರ್ಣ ರಹಿತ ಶಿಕ್ಷಣ – ಒಂದು ಚರ್ಚೆ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ “ಅನುತ್ತೀರ್ಣ ರಹಿತ ಶಿಕ್ಷಣ ವ್ಯವಸ್ಥೆ” ಎಂಬ ವಿಷಯದ ಬಗ್ಗೆ ವಿದ್ಯಾರ್ಥಿ ಶಿಕ್ಷಕರಿಗೆ ಚರ್ಚೆ ಏರ್ಪಡಿಸಲಾಗಿತ್ತು. ಅದರಲ್ಲಿ ವಿಷಯದ ಪರವಾಗಿ ಮಾತನಾಡಿದ ತಂಡದವರು ‘ಅನುತ್ತೀರ್ಣತೆ ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿ ಅದು ತನ್ನ ಶಿಕ್ಷಣವನ್ನು ಮೊಟಕುಗೊಳಿಸುತ್ತದೆ. ಇದರಿಂದ ಸಮಾಜಕ್ಕೂ ದೇಶಕ್ಕೂ ಹಾನಿ. ಅನುತ್ತೀರ್ಣತೆ ಕೇವಲ ಮಗುವಿನ ಬೌದ್ಧಿಕ ಗುಣಮಟ್ಟ ಕಾರಣವಾಗಿರದೇ, ತರಗತಿಯ ಶಿಕ್ಷಕ ಹಾಗೂ ಮಕ್ಕಳ ಅನುಪಾತ ಮತ್ತು ಶಿಕ್ಷಕರಿಗೆ ಹೊರೆಯಾಗುತ್ತಿರುವ ಶಾಲೆಯ ಹೊರತಾದ ಇತರ ಕೆಲಸಗಳ ಹೇರಿಕೆಯೂ ಕಾರಣ’ ಎಂಬುವ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಷಯಕ್ಕೆ ವಿರುದ್ಧ ರೀತಿಯಲ್ಲಿ ಚರ್ಚಿಸಿದ ತಂಡ ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿಯೇ ಶಿಕ್ಷಣ ಎನ್ನುವಂತಿರುವಾಗ ಮಗುವಿನ ಕಲಿಕೆಯ ಮಟ್ಟ ಕುಂಠಿತವಾದಾಗ ಅದರ ಲೋಪದೋಷಗಳನ್ನು ಸರಿಪಡಿಸಲು ಅನುತ್ತೀರ್ಣತೆ ಅನಿವಾರ್ಯ ಮಾತ್ರವಲ್ಲ ಅದು ಮುಂದೆ ತನ್ನ ಲೋಪದೋಷ ಸರಿಪಡಿಸಿ ಉತ್ತಮ ಸಾಧನೆ ಮಾಡಲು ಒಂದು ಅವಕಾಶ ಎಂಬ ವಾದವನ್ನು ಮಂಡಿಸಿದರು.

ಕಾರ‍್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪನ್ಯಾಸಕಿ ಶ್ರೀಮತಿ. ಉಷಾ ರವರು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸರ್ವಶಿಕ್ಷಣ ಅಭಿಯಾನದ ಉದ್ಧೇಶವೇ ಮಗುವನ್ನು ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನದ ಮೂಲಕ ಹಂತ ಹಂತವಾಗಿ ಉತ್ತೀರ್ಣತೆಯ ಮಟ್ಟದತ್ತ ಬೆಳೆಸುವುದು ಇದರಿಂದ ಎಲ್ಲರಿಗೂ ಸಮಾಜದಲ್ಲಿ ಶಿಕ್ಷಣ ನೀಡಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿ ಶಿಕ್ಷಕರಾದ ಸ್ವಾತಿ ಅತಿಥಿಗಳನ್ನು ಸ್ವಾಗತಿಸಿದರು. ರೋಲ್ವಿನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಪ್ನಾ ಧನ್ಯವಾದವನ್ನಿತ್ತರು. ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.

ವಿಜ್ಞಾನ ಪಠ್ಯಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಮುಟ್ಟುವಂತಿರಲಿ

ವಿಜ್ಞಾನದ ಪಠ್ಯಗಳು ಗ್ರಾಮೀಣ ಭಾಗದವರಿಗೆ, ಸಾಮಾಜಿಕವಾಗಿ ಹಿಂದುಳಿದವರಿಗೆ ಸುಲಭವಾಗಿ ಅರ್ಥೈಸುವಂತಿದೆಯೇ ಎಂಬುವುದರ ಬಗ್ಗೆ ಚರ್ಚೆಗಳಾಗಬೇಕು ಎಂಬುದಾಗಿ ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ: ಮಹಾಬಲೇಶ್ವರ ರಾವ್ ರವರು ಕರೆಕೊಟ್ಟರು.

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ಬೋಧನೆಯ ಸಮಸ್ಯೆಗಳು ಎಂಬ ವಿಷಯದ ಬಗ್ಗೆ ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಕು: ಅಮೃತಾ ಆರ್. ಕೆ. ಯವರು ವಿವರಿಸುತ್ತಾ “ಇಂದಿನ ಬುದ್ಧಿವಂತ ಮಕ್ಕಳನ್ನು ತರಗತಿಯಲ್ಲಿ ಎದುರಿಸುವ ಸವಾಲನ್ನಿಟ್ಟುಕೊಂಡೇ ವಿಜ್ಞಾನದ ಶಿಕ್ಷಕ ಕಾಲಕಾಲಕ್ಕೆ ಸಿಗುವ ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಂಡು, ತನ್ನ ಜ್ಙಾನ ಅಭಿವೃದ್ಧಿಪಡಿಸುತ್ತಲೇ ವಿಜ್ಙನ ಬೋಧನೆಯನ್ನು ಪ್ರಾಯೋಗಿಕವಾಗಿ, ಪರಿಣಾಮಕಾರಿಯಾಗಿ ಮಾಡಬೇಕಾದುದು ಕರ್ತವ್ಯವಾಗಿದೆ. ಅದಕ್ಕೆ ಮುಂದಿನ ದಿನಗಳಲ್ಲಿ ತಾವು ಸಿದ್ಧತೆ ಮಾಡಿಕೊಳ್ಳಬೇಕು” ಎಂಬುವ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಕಾಲೇಜಿನ ಪ್ರಾಚಾರ‍್ಯರಾದ ಡಾ: ಮಹಾಬಲೇಶ್ವರ ರಾವ್ ರವರು “ವಿಜ್ಞಾನ ಬೋಧನೆಯ ಮೂಲ ಉದ್ದೇಶವೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಸಾಮರ್ಥ್ಯ, ಮಾಹಿತಿಯ ಸಂಗ್ರಹಣೆಯ ಕೌಶಲವನ್ನು ಬೆಳೆಸುವುದಾಗಿದೆ. ಆದರೆ ಈಗಿನ ಪಠ್ಯಗಳು ವೃತ್ತಿಪರ ತರಬೇತಿಯ ಉದ್ದೇಶಗಳಿಗಾಗಿಯೇ ರಚಿತಗೊಂಡಿವೆ. ಇವು ಗ್ರಾಮೀಣ ಭಾಗದ ಮಕ್ಕಳಿಗೆ, ಸಾಮಾನ್ಯ ವರ್ಗದವರಿಗೆ ತಲುಪಿ ಶಿಕ್ಷಣದ ಉದ್ದೇಶಗಳನ್ನು ಈಡೇರಿಸಲು ಸಾಧ್ಯವೇ?” ಎಂಬುದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಹಾಗೂ ಅವುಗಳ ಗ್ಗೆ ಚರ್ಚೆಗಳಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಶಿಕ್ಷಕರಾದ ಮೆಲಿಸಾ ಡಿ’ಸಿಲ್ವ ಅತಿಥಿಗಳನ್ನು ಸ್ವಾಗತಿಸಿದರು. ಅಶ್ವಿನಿ ಧನ್ಯವಾದವಿತ್ತರು. ದೀಪಾ ವಿ ರವರು ಕಾರ್ಯಕ್ರಮ ನಿರೂಪಿಸಿದರು.

ಪರಿಪೂರ್ಣ ಕಲಿಕೆ ಸಾಧ್ಯ

ಕುಂಜಿಬೆಟ್ಟು: “ ಅಧ್ಯಾಪಕ ಒಳ್ಳೆಯ ಯೋಜನೆ ಹಾಗೂ ಯೋಚನೆಯನ್ನು ಮಾಡಿ, ಜ್ಞಾನ ಸಂಪಾದಿಸಿ ತರಗತಿಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ಮಾಡಿದಾಗ ಕಲಿಕೆ ಪರಿಪೂರ್ಣವಾಗುತ್ತದೆ” ಎಂದು ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ: ಮಹಾಬಲೇಶ್ವರ ರಾವ್‌ರವರು ಇಂಗ್ಲಿಷ್ ಬೋಧನ ವಿದ್ಯಾರ್ಥಿ ಶಿಕ್ಷಕರು ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಉಡುಪಿಯ ಶಾರದಾ ರೆಸಿಡೆನ್ಸಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಅಗಸ್ಟಿನ್ ಕೆ. ಎ. ರವರು “ಬೋಧನ ಉದ್ದಿಷ್ಟಗಳು ತರಗತಿಯಲ್ಲಿ ಸ್ಪಷ್ಟವಾಗಿ ವಿದ್ಯಾರ್ಥಿಗಳ ಕಲಿಕೆಯ ಮೂಲಕ ಮೂಡಿ ಬರಬೇಕು, ಅಂತಹ ಬೋಧನೆ ನಿಮ್ಮದಾಗಬೇಕು. ಇಂಗ್ಲಿಷ್ ಭಾಷಾ ಬೋಧಕರು ತಮ್ಮ ಇಂಗ್ಲಿಷ್ ಜ್ಞಾನವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮವಹಿಸಬೇಕು” ಎಂದು ಕರೆನೀಡಿದರು. ಅನಂತರ ವಿದ್ಯಾರ್ಥಿ ಶಿಕ್ಷಕರಿಂದ ಇಂಗ್ಲಿಷ್ ಭಾಷಾ ಬೋಧನೆಗೆ ಸಂಬಂಧಿಸಿದಂತೆ ವೈವಿಧ್ಯಮಯ ಕಾರ್ಯಕ್ರಮ ಮೂಡಿಬಂದಿತು. ವಿದ್ಯಾರ್ಥಿ ಶಿಕ್ಷಕರಾದ ಮೇಧಾ ಅತಿಥಿಗಳನ್ನು ಸ್ವಾಗತಿಸಿದರು. ಶ್ರುತಿ ಧನ್ಯವಾದವನ್ನಿತ್ತರು. ಮಾನಸಾ ಕಾರ್ಯಕ್ರಮ ನಿರೂಪಿಸಿದರು.

ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ

ಕುಂಜಿಬೆಟ್ಟು: ಸ್ತನ ಕ್ಯಾನ್ಸರ್ ಅನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆ ಹಚ್ಚಿ, ವ್ಯವಸ್ಥಿತ ಆಹಾರ ಪದ್ದತಿಯನ್ನು ರೂಢಿಸಿಕೊಂಡು, ಚಿಕಿತ್ಸೆಯನ್ನು ಪಡೆಯಬಹುದು. ಅದಕ್ಕಾಗಿ ಚಿಂತಿಸದೇ ಹೇಳಲು ಮುಜುಗರಪಡದೆ ಮಹಿಳೆಯರು ಹೆಚ್ಚಿನ ಅರಿವನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ತಜ್ಞೆಯಾದ ಡಾ: ವಿಜಯಲಕ್ಷ್ಮೀ ದೇಶಮನೆ ವಿದ್ಯಾರ್ಥಿ ಶಿಕ್ಷಕರಿಗೆ ಮಾಹಿತಿ ನೀಡಿದರು.

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಶಿಕ್ಷಕರಿಗಾಗಿ ದಿವಂಗತ ಡಾ: ಬಿ.ಎಲ್. ಶಂಕರನಾರಾಯಣ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ ಮಾಹಿತಿ ನೀಡಿದ ಡಾ: ವಿಜಯಲಕ್ಷ್ಮೀ ದೇಶಮನೆ ಈ ಕಾಯಿಲೆ ಬೆಳೆಯುತ್ತಿರುವುದು ಆತಂಕವನ್ನು ತಂದಿದೆ. ಆದ್ದರಿಂದ ಮಹಿಳೆಯರು ಜಾಗರೂಕರಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಡಾ: ಮಹಾಬಲೇಶ್ವರ ರಾವ್ ಉಪನ್ಯಾಸದ ಮಹತ್ವ ಹಾಗೂ ವಿಶೇಷತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಶಿಕ್ಷಣ ಟ್ರಸ್ಟ್‌ನ ಶ್ರೀ ಅನಂತಯ್ಯ ಆಚಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಪ್ರೀತಿ.ಎಸ್. ರಾವ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ.ಕುಶಾಲಿನಿ ಧನ್ಯವಾದವಿತ್ತರು.

‘ತನ್ನ ಏಳಿಗೆಗೆ ತಾನೇ ಶಿಲ್ಪಿ’

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರೊ: ಒ. ಎಸ್. ಅಂಚನ್ ಸ್ಮರಣಾರ್ಥ ಉಪನ್ಯಾಸವನ್ನು ವಿದ್ಯಾರ್ಥಿ ಶಿಕ್ಷಕರಿಗಾಗಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅತಿಥಿಗಳಾಗಿದ್ದ ಆಳ್ವಾಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ: ಕುರಿಯನ್‌ರವರು ‘ಮಗುವಿನ ಕಲಿಕೆಗೆ ಅದರದೇ ವೇಗ ಮತ್ತು ದಾರಿ ಇರುತ್ತದೆ. ಅದನ್ನು ಅರ್ಥಮಾಡಿಕೊಂಡು ಶಿಕ್ಷಕ ವಿಚಾರ ವಿನಿಮಯದೊಂದಿಗೆ ತನ್ನ ಜ್ಞಾನವನ್ನು ಬೆಳೆಸುತ್ತಾ ಸಾಗಿದಾಗ ಮಾತ್ರ ವೃತ್ತಿಪರತೆ ಗಳಿಸಿಕೊಳ್ಳಲು ಸಾಧ್ಯ’ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರಾದ ಡಾ: ಮಹಾಬಲೇಶ್ವರ ರಾವ್‌ರವರು ‘ಶಿಕ್ಷಕ ತನ್ನ ಏಳಿಗೆಗೆ ತಾನೇ ಶಿಲ್ಪಿಯಾಗಿ ನಿರಂತರ ಅಧ್ಯಯನದಿಂದ ಯಾವ ಅನುಭವವೂ ನಗಣ್ಯವಲ್ಲ ಎಂಬು ಭಾವಿಸಿ ಸಾಧನೆಯನ್ನು ಮಾಡಿದಾಗ ವೃತ್ತಿಪರ ವಿಕಾಸ ಸಾಧ್ಯ’ ಎಂಬುವುದನ್ನು ತನ್ನ ಬದುಕಿನ ಜ್ವಲಂತ ಪುಟಗಳನ್ನೇ ತೆರೆದಿಟ್ಟುಕೊಂಡು ವಿದ್ಯಾರ್ಥಿ ಶಿಕ್ಷಕರಿಗೆ ಸಾಧನೆಯೆಡೆಗೆ ಸಾಗಬೇಕೆಂದು ಹಾರೈಸಿದರು.

ಕಾಲೇಜಿನ ಅಧ್ಯಾಪಕರಾದ ಶ್ರೀಮತಿ ಕುಶಾಲಿನಿ ಸಿ.ಎನ್. ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ. ಪ್ರೀತಿ ಎಸ್. ರಾವ್ ಧನ್ಯವಾದವನಿತ್ತರು. ಶ್ರೀಮತಿ ಧನಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಭಾ ಪ್ರದರ್ಶನ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಶಿಕ್ಷಕರಿಗಾಗಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಅನೇಕ ವಿದ್ಯಾರ್ಥಿ ಶಿಕ್ಷಕರು ನೃತ್ಯ, ಹಾಡು, ಭಾವಗಾಯನದಂತಹ ವೈವಿದ್ಯಮಯ ಮನೋರಂಜನಾತ್ಮಕವಾದ ಕಾರ್ಯಕ್ರಮ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ: ಮಹಾಬಲೇಶ್ವರ ರಾವ್‌ರವರು ವಿದ್ಯಾರ್ಥಿ ಶಿಕ್ಷಕರು ಮುಂದೆ ಶಾಲೆಗಳಲ್ಲಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ ಹೊರತರುವ ಮೂಲಕ ಸಾಂಸ್ಕೃತಿಕ, ಪಾರಂಪರಿಕ ಕಲೆ, ಕೃತಿ, ಸಾಹಿತ್ಯಗಳನ್ನು ಪರಿಚಯಿಸಿ ಮಕ್ಕಳು ಒತ್ತಡಗಳಿಂದ ಮುಕ್ತವಾಗಿ ಬದುಕುವಂತಹ ಸನ್ನಿವೇಶ ಕಲ್ಪಿಸಿಕೊಡಬೇಕು; ಮಾತ್ರವಲ್ಲದೆ ವಿದ್ಯಾರ್ಥಿ ಶಿಕ್ಷಕರು ತಾವು ಸಾಂಸ್ಕೃತಿಕ, ಸಾಹಿತ್ಯಿಕ ಸಂಪನ್ನರಾಗಬೇಕು ಎಂಬುವುದಾಗಿ ಕರೆಕೊಟ್ಟರು. ವಿದ್ಯಾರ್ಥಿ ಶಿಕ್ಷಕರಾದ ಕು. ವೃಂದ ಹಾಗೂ ಶ್ರೀ. ಶ್ರೀಧರ್ ಕಾರ್ಯಕ್ರಮ ನಿರ್ವಹಿಸಿರು. ಕು. ಕೀರ್ತಿ ಸ್ವಾಗತಿಸಿದರು. ಕು. ವೀಣಾ ಧನ್ಯವಾದವನ್ನಿತ್ತರು 
     
 ಉಡುಪಿ, ಕುಂಜಿಬೆಟ್ಟಿನ ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಶಿಕ್ಷಕರಿಗಾಗಿ ‘ಶಿಕ್ಷಕ ವೃತ್ತಿಯ ಮುಂದಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಯೊಂದನ್ನು ಏರ್ಪಡಿಸಲಾಗಿತ್ತು. ಹಲವು ವಿದ್ಯಾರ್ಥಿ ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷರೂ ಕಾಲೇಜಿನ ಪ್ರಾಂಶುಪಾಲರೂ ಆದ ಡಾ: ಮಹಾಬಲೇಶ್ವರ ರಾವ್ ಅವರು “ ಶಿಕ್ಷಕ ಮಾಹಿತಿಯ ಕೊರತೆಯನ್ನು ನೀಗಿಸಿಕೊಂಡು, ಭಾಷಾ ಸಾಮರ್ಥ್ಯ ಬೆಳೆಸಿಕೊಂಡು, ಸಂಸ್ಥೆಗಾಗಿ ಬದ್ಧತೆಯ ನೆಲೆಯಲ್ಲಿ ದುಡಿದಾಗ ಶಿಕ್ಷಕ ವೃತ್ತಿ ಸವಾಲಾಗದೇ ಜ್ಞಾನ ಸಮಾಜದ ನಿರ್ಮಾಣವಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿ ಶಿಕ್ಷಕರು ಅಣಿಯಾಗಬೇಕು” ಎಂದು ಕರೆ ಕೊಟ್ಟರು. ವಿದ್ಯಾರ್ಥಿ ಶಿಕ್ಷಕರಾದ ಶ್ರೀಧರ್ ಅತಿಥಿಗಳನ್ನು ಸ್ವಾಗತಿಸಿದರು. ಕು. ಅಕ್ಷತಾ ಧನ್ಯವಾದವನ್ನಿತ್ತರು. ಕು.ಸುಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿರು.

College Day Celebration

ಗಣಿತ ಬೋಧನ ವಿಧಾನ ಕಾರ್ಯಕ್ರಮ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಗಣಿತ ಬೋಧನ ವಿಧಾನ ವಿಭಾಗದ ವತಿಯಿಂದ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು ಮುಖ್ಯ ಅತಿಥಿಗಳಾಗಿ ಬ್ರಹ್ಮಾವರದ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರು ಹಾಗೂ ಹಿರಿಯ ಗಣಿತಶಿಕ್ಷಕರಾದ ಶ್ರೀ.ಕೆ.ಕೃಷ್ಣಮೂರ್ತಿ ಅವರು ಪಾಲ್ಗೊಂಡಿದ್ದರು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ಜರಗಿದ ಈ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್‍ಯರಾದ ಡಾ:ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು.

ಶ್ರೀಯುತ ಕೃಷ್ಣಮೂರ್ತಿ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ-“ ಯಾವುದೇ ಸಮಸ್ಯೆಗೂ ಸರಳಗೊಳಿಸುವ ಉಪಾಯವಿದೆ. ಗಣಿತವೂ ಅದಕ್ಕೆ ಹೊರತಾಗಿಲ್ಲ ಮೂಲತಃ ಗಣಿತ ಕಷ್ಟವೇ ಅಲ್ಲ. ನಾವು ಗಣಿತವನ್ನು ಬೋಧಿಸುವ ಕ್ರಮದಲ್ಲಿ ತಪ್ಪಿದೆ. ಗಣಿತವು ಜೀವನದ ಅವಿಭಾಜ್ಯ ಅಂಗ ಎಂಬ ಭಾವನೆಯನ್ನು ನಾವು ಬೆಳೆಸದೇ ಹೋಗಿರುವುದೂ ಇದಕ್ಕೆ ಕಾರಣ. ವಿದ್ಯಾರ್ಥಿಗಳಲ್ಲಿ ಆತ್ಮೀಯತೆಯನ್ನು ಬೆಳೆಸಿಕೊಳ್ಳುವುದರ ಮೂಲಕ, ಅಮೂರ್ತ ನಿರೂಪಣೆಗೆ ಬದಲಾಗಿ ಮಕ್ಕಳ ಆದುನುಡಿಗೆ ಸಮೀಪವಾದ ಭಾಷೆಯ ಮೂಲಕ, ಹಾಸ್ಯ ಪ್ರಜ್ಞೆಯ ಮೂಲಕ, ನಿಜ ಜೀವನದ ಸಂನಿವೇಶದ ಮೂಲಕ ಕಲಿಸಿದರೆ ಗಣಿತ ಖಂಡಿತವಾಗಿಯೂ ಮಕ್ಕಳಿಗೆ ಕಷ್ಟವಾಗುವುದಿಲ್ಲ.” ಎಂದು ಅಭಿಪ್ರಾಯ ಪಟ್ಟರು. ಹಾಗೂ ಅಂಕಗಣಿತ, ಬೀಜಗಣಿತ, ರೇಖಾಗಣಿತದ ವಿವಿಧ ಪರಿಕಲ್ಪನೆಗಳನ್ನು ಸರಳವಾಗಿ ಮಕ್ಕಳಿಗೆ ತಿಳಿಹೇಳುವ ತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್‍ಯರಾದ ಡಾ:ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ-“ ಗಣಿತದ ಮೂಲಕ ನಾವಿಂದು ಮಕ್ಕಳಿಗೆ ಕಲಿಸುವ ವಿವಿದ ಪರಿಕಲ್ಪನೆಗಳು ಅವರ ನಾಳೆಯ ಬದುಕಿಗೆ ಬೇಕೇ? ಬೇಡವೇ? ಎಂಬ ವಿಮೋಚನೆ ಇಲ್ಲದೆ ಎಲ್ಲವನ್ನು ಪಠ್ಯಪುಸ್ತಕದಲ್ಲಿ ತುರುಕುತ್ತಿರುವುದನ್ನು ಕಾಣುತ್ತಿದ್ದೇವೆ. ಇಂದಿನ ಗಣಿತ ಪುಸ್ತಕಗಳಲ್ಲಿ ಬಳಸಿರುವ ಪರಿಭಾಷೆಗಳು ಮುಖ್ಯವಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಿನ್ನತೆಯ ಕಾರಣದಿಂದ ವಿಪರೀತ ಗೊಂದಲ ಹುಟ್ಟಿಸುತ್ತವೆ. ಬಿಗಿಯಾದ ಈ ಪಠ್ಯಪುಸ್ತಕವು ಮಕ್ಕಳಲ್ಲಿ ಭಯಹುಟ್ಟಿಸಬಹುದು. ಶಾಸ್ತ್ರವಿಷಯಗಳನ್ನು ಸರಳಗೊಳಿಸಿ ಹೇಳುವುದು ಬೇಕಾಗಿಲ್ಲ. ಸರಳಗೊಳಿಸಿದಾಗ ಅದು ದುರ್ಬಲವಾಗುತ್ತದೆ ಅದನ್ನು ಆಕರ್ಷಕವಾಗಿ, ಆಪ್ಯಾಯಮಾನವಾಗಿ ಕಲಿಸುವ ಬಗೆ ಹೇಗೆ? ಎಂಬುದಕ್ಕೆ ಒತ್ತು ನೀಡಬೇಕು. ಗಣಿತ ಕ್ಷೇತ್ರದ ಇತ್ತೀಚಿನ ಒಲವುಗಳು, ತಂತ್ರ, ವಿಧಾನಗಳತ್ತ ಗಮನ ಸೆಳೆಯಬೆಕು. ಗಣಿತ ಸಂಬಂಧಿತ ಪತ್ರಿಕೆಗಳ ಅಧ್ಯಯನದ ಮೂಲಕ ಗಣಿತ ಬೋಧನೆಗೆ ಬೇಕಾದ ಪೌಷ್ಟಿಕ ಆಹಾರವನ್ನು ಪಡೆಯಬೇಕು. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಣಿತ ಬೋಧನದ ವಿದ್ಯಾರ್ಥಿ ಶಿಕ್ಷಕಿಯರು ಗಣಿತ ರಸಪ್ರಶ್ನೆ, ಮಾಯಾಚೌಕ, ಮೋಜಿನ ಗಣಿತ, ಪವರ್‌ಪಾಯಿಂಟ್ ಪ್ರಸೆಂಟೇಶನ್, ಕಿರುಪ್ರಹಸನ, ಸಂಖ್ಯಾಚಿತ್ರಗಳು, ವೇದಗಣಿತ, ಸಮೂಹ ಗಯನ ಮೊದಲಾದ ಗಣಿತ ಸಂಬಂಧಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.

ಕು: ಸುಮಲತಾ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ಕು:ಹೇಮಲತಾ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕು: ಅಜಂಲಿ ಭಟ್ ಅವರು ಧನ್ಯವಾದ ಅಮರ್ಪಿಸಿದರು. ಕು: ಶ್ರುತಿ ಕೋಟ್ಯಾನ್ ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಭೌತ ವಿಜ್ಞಾನ ವಿಭಾಗದ ಕಾರ್ಯಕ್ರಮ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಭೌತ ವಿಜ್ಞಾನ ವಿಭಾಗದ ವತಿಯಿಂದ ವೈವಿಧ್ಯಮಯ ಚಟುವಟಿಕೆಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್‍ಯರಾದ ಡಾ:ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಪದವಿಪೂರ್ವ ಕಾಲೇಜಿನ ಪದವೀಧರ ಸಹಾಯಕ ಶ್ರೀ.ನಾಗೇಂದ್ರ ಪೈ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ‘ವಿಜ್ಞಾನ ಶಿಕ್ಷಣವನ್ನು ಜನಪ್ರಿಯಗೊಳಿಸುವುದು ಸಾಧ್ಯವೇ? ಹೇಗೆ?’ ಎಂಬ ವಿಷಯವನ್ನು ಕುರಿತು ಶ್ರೀಯುತ ನಾಗೇಂದ್ರ ಪೈ ಅವರು ಮಾತನಾಡಿದರು. ಅವರು “ವಿಜ್ಞಾನವನ್ನು ಜನಪ್ರಿಯಗೊಳಿಸಲು ಸಾಧ್ಯವೂ ಹೌದು. ಅಗತ್ಯವೂ ಹೌದು. ಏಕೆಂದರೆ ವಿಜ್ಞಾನವು ಯಾರ ಖಾಸಗಿ ಸೊತ್ತೂ ಅಲ್ಲ. ಅದು ಮನುಕುಲದ ಸೊತ್ತು. ಅದರೆ ವಿಜ್ಞಾನವೇ ಪರಮಸತ್ಯವಲ್ಲ. ಕಾಲಕಾಲಕ್ಕೆ ಹೊಸ ಹೊಸ ವಿಷಯಗಳು ಬೆಳಕಿಗೆ ಬಂದಂತೆ ವಿಜ್ಞಾನದ ಪರಿಭಾಷೆಯೂ ಬದಲಾಗುತ್ತದೆ; ಚರ್ಚೆಯೂ ಬದಲಾಗುತ್ತದೆ. ಚಲನಶೀಲತೆಯೇ ವಿಜ್ಞಾನದ ಗುಣ. ಮನುಷ್ಯನ ಮನೋಭೂಮಿಕೆಯು ವಿಜ್ಞಾನ ಬೆಳೆದ ವೇಗದಲ್ಲಿ ಬದಲಾಗಿಲ್ಲದೇ ಇರುವುದರಿಂದ ವಿಜ್ಞಾನ ಜಾಗೃತಿ ಇಂದಿಗೂ ಅನಿವಾರ್‍ಯವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ ವಿಜ್ಞಾನಕ್ಕೆ ನಂಬಿಕೆಯ ಅರ್ಹತೆ ಜಾಸ್ತಿ ಇರುವುದರಿಂದ ಅದರ ಹೆಸರಿನಲ್ಲಿ ಜನರನ್ನು ಸುಲಭವಾಗಿ ವಂಚಿಸುವವರೂ ತುಂಬಾ ಮಂದಿ ಇದ್ದಾರೆ. ವಿಜ್ಞಾನದೊಂದಿಗೆ ವಿವೇಕವನ್ನೂ ಬೆಳೆಸಬೇಕಾದುದು ಇಂದಿನ ಅನಿವಾರ್‍ಯತೆ” ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವಹಿಸಿದ್ದರು ಪ್ರಾಚಾರ್‍ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ – “ವಿಜ್ಞಾನದ ಮೂಲಕ ಪವಾಡಗಳನ್ನೋ, ಮೂಢನಂಬಿಕೆಗಳನ್ನೋ ಬಯಲುಗೊಳಿಸುವಾಗ ನಮಗೆ ಅದರ ಹಿಂದಿರುವ ವೈಜ್ಞಾನಿಕತೆ, ವೈಚಾರಿಕತೆ, ಅದರ ಹಿಂದಿನ ಸಂದೇಶ ಮುಖ್ಯವಾಗಬೇಕೇ ಹೊರತು ಪವಾಡ, ನಂಬಿಕೆಗಳ ವೈಭವೀಕರಣ ಸಲ್ಲದು. ಇದರಿಂದ ಮೂಲ ಉದ್ದೇಶವೇ ವಿಫಲವಾಗಬಹುದು. ತಲೆ ತಲೆಮಾರುಗಳಿಂದ ಬಂದ ನಂಬಿಕೆಗಳನ್ನು ಒಮ್ಮೆಲೇ ಮೂಲೋತ್ಪಾಟನೆ ಮಾಡಲು ಸಾಧ್ಯವಿಲ್ಲ. ಅದೊಂದು ಚಳವಳದ ರೂಪ ಪಡೆದಾಗ, ಜನಪರವಾದ ಹೋರಾಟವಾದಾಗ ಮಾತ್ರ ಸಾಧ್ಯ. ವಿಜ್ಞಾನ ಜಾಗೃತಿಯ ಕಾರ್‍ಯಕ್ರಮಗಳಷ್ಟೇ ಅವುಗಳಲ್ಲಿ ಬಳಸುವ ಭಾಷೆಯೂ ಮುಖ್ಯ. ಸಂಕೀರ್ಣ ಸ್ವರೂಪದ ವಿಷಯಗಳನ್ನು ಪಾಮರರಿಗೆ ತಿಳಿಹೇಳುವ ಪ್ರಯತ್ನಗಳು ಹೆಚ್ಚು ನಡೆಯಬೇಕು. ಕುವೆಂಪು, ಶಿವರಾಮಕಾರಂತ, ಜಿ.ಟಿ.ನಾರಾಯಣ ರಾವ್. ಜೆ.ಆರ್.ಲಕ್ಷ್ಮಣರಾವ್, ಪೂರ್ಣಚಂದ್ರ ತೇಜಸ್ವಿ, ಅಡ್ಯನಡ್ಕ ಕೃಷ್ಣಭಟ್ ಮೊದಲಾದವರ ಶ್ರಮ ಈ ದಿಸೆಯಲ್ಲಿ ಶ್ಲಾಘನೀಯ” ಎಂದು ತಿಳಿಸಿದರು.

ಸಮಾರಂಭದಲ್ಲಿ ಭೌತವಿಜ್ಞಾನದ ವಿದ್ಯಾರ್ಥಿ ಶಿಕ್ಷಕರು ವಿಜ್ಞಾನರಸಪ್ರಶ್ನೆ, ಸಮೂಹ ಗಾಯನ, ವಿಜ್ಞಾನ ವಿಷಯಗಳನ್ನು ಆಧರಿಸಿದ ಪ್ರಬಂಧ ಮಂಡನೆ, ಪವರ್ ಪಾಯಿಂಟ್ ಪ್ರಸೆಂಟೇಶನ್, ಕಿರುಪ್ರಹಸನ ಮೊದಲಾದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.

ಕು: ಪವಿತ್ರಾ ಗಾಂವ್ಕರ್ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕು: ಜ್ಯೋತಿ ಕರ್ಕೇರಾ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕು:ಸುಮಲತಾ ಅವರು ಧನ್ಯವಾದ ಸಮರ್ಪಿಸಿದರು. ಕು: ಜಯಂತಿ ಮರಾಠಿ ಅವರು ಕಾರ್‍ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಶ್ರೀಮತಿ ಕುಶಾಲಿನಿ ಸಿ.ಎನ್. ಅವರು ಮಾರ್ಗದರ್ಶಕರಾಗಿ ಸಹಕರಿಸಿದರು.

ಶಿಕ್ಷಕರ ದಿನಾಚರಣೆ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜು ಹಾಗೂ ಹಳೆವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಈಚೆಗೆ ‘ಶಿಕ್ಷಕರ ದಿನಾಚರಣೆ’ ಕಾರ್‍ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್‍ಯರಾದ ಡಾ: ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಾವರದ ಎಸ್.ಎಂ.ಎಸ್. ಪದವಿಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ಶ್ರೀಯುತ ಬಿ.ಶ್ರೀನಿವಾಸ ಭಟ್ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀಯುತ ಭಟ್ ಅವರನ್ನು ಕಾಲೇಜು ಹಾಗೂ ಸಂಘದ ವತಿಯಿಂದ ಸಂಮಾನಿಸಲಾಯಿತು. ಕಾಲೇಜಿನ ಪ್ರಾಚಾರ್‍ಯರು ಶಾಲು ಹೊದಿಸಿ, ಹಾರ ಹಾಕಿ ಹಣ್ಣು ಹಂಪಲುಗಳೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಸಂಮಾನಕ್ಕೆ ಉತ್ತರವಾಗಿಭಟ್ ಅವರು ಮಾತನಾಡುತ್ತಾ – “ಶಿಕ್ಷಕರು ತರಗತಿಯ ಒಳಗೆ ನಿಷ್ಠುರತೆಯಿಂದಿರಬೇಕು. ತರಗತಿಯ ಹೊರಗೆ ವಿದ್ಯಾರ್ಥಿಗಳೊಂದಿಗೆ ಪ್ರೀತಿ ಸಲುಗೆ ತೋರಬೇಕು. ವಿದ್ಯಾರ್ಥಿಗಳು ಗೈಡ್ ತೆಗೆದುಕೊಳ್ಳದಂತೆ, ಟ್ಯೂಶನ್‌ಗೆ ಹೋಗುವ ಅಗತ್ಯವಿಲ್ಲದಂತೆ ಪಾಠಮಾಡಬೇಕು. ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಶಿಕ್ಷಕ ವೃತ್ತಿಗೆ ಹಿಂದಿನಷ್ಟೇ ಇರುವ ಗೌರವ ಈಗಲೂ ದೊರೆಯುತ್ತದೆ. ಶೀಲ ಮತ್ತು ಆರೋಗ್ಯಗಳೆಡೆಗೆ ಆದ್ಯತೆ ನೀಡುವುದೆ, ಒಳ್ಳೆಯ ಅಭ್ಯಾಸಗಳಿಂದಷ್ಟೇ ಒಳ್ಳೆಯವರಾಗಲು ಸಾಧ್ಯ ಎಂಬುದನ್ನು ಅರಿಯುವುದು, ಒಳ್ಳೆಯವರ ಸಹವಾಸ, ಓದುವ ಹವ್ಯಾಸ, ಚೆನ್ನಾದ ಪೂರ್ವ ತಯಾರಿ, ಪಾಪಪ್ರಜ್ಞೆ ಕಾಡದಂತೆ ನಮ್ಮ ನುಡಿ, ನಡೆ, ಆಚಾರ, ವಿಚಾರದಲ್ಲಿ ಶುದ್ಧಿಯನ್ನು ಕಾಯ್ದುಕೊಂಡು ಸಾರ್ಥಕ ಜೀವನ ನಡೆಸುವುದು ಇವೇ ಮೊದಲಾದ ಸದ್ಗುಣಗಳ ಅಳವಡಿಕೆಯಿಂದ ಸಂತೃಪ್ತ ಅಧ್ಯಾಪನ ಸಾಧ್ಯ” ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್‍ಯರಾದ ಡಾ:ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ – “ ಡಾ. ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಕರಾಗಿ, ಅಸಾಧಾರಣ ಮಟ್ಟದ ಇಂಗ್ಲಿಷ್ ಸಂವಹನಕಾರರಾಗಿ, ಭಾರತೀಯ ದರ್ಶನ ಶಾಸ್ತ್ರಗಳ ಹಿರಿಮೆಯನ್ನು ಜಗತ್ತಿಗೆ ಸಾರಿದವರಾಗಿ ನಮಗಿಂದು ಮುಖ್ಯರಾಗುತ್ತಾರೆ.” ಎಂದು ತಿಳಿಸಿದರಲ್ಲದೆ ಇಂದು ಸರ್ಕಾರವು ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದ ವರೆಗೆ ಹಂತಹಂತವಾಗಿ ಅನುದಾನಿತ ವ್ಯವಸ್ಥೆಯನ್ನೇ ನಾಶಗೊಳಿಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಯಾವುದೇ ಸೇವಾಭದ್ರತೆ ಇಲ್ಲದೆ ಅನುದಾನರಹಿತ ವಲಯದಲ್ಲಿ ಇಂದು ಶಿಕ್ಷಕರು ‘ಬೌದ್ಧಿಕ ಕೂಲಿ’ಗಳಾಗಿ ಬದುಕಬೇಕಾದ ದುಸ್ಥಿತಿಯನ್ನು ಸರ್ಕಾರ ಸೃಷ್ಟಿಸುತ್ತಿರುವುದರತ್ತ ಗಮನ ಸೆಳೆದರು.

ಇಂತಹ ನಿರಾಶಾದಾಯಕ ವಾತಾವರಣದಲ್ಲಿ ಗುಣಾತ್ಮಕ ಶಿಕ್ಷಣವನ್ನು ಹೇಗೆ ಕಾಣಲು ಸಾಧ್ಯವಿದೆ ಎಂದೂ ಅವರು ಪ್ರಶ್ನಿಸಿದರು. ಆದರೆ ಸಂಬಳವೊಂದೇ ಮುಖ್ಯವಾಗದೆ ಮಕ್ಕಳ ಎದುರಿನಲ್ಲಿ ಪ್ರೀತಿಯಿಂದ ಪಾಠಮಾಡಿ ಅವರ ಮುಖದಲ್ಲಿ ಮುಗುಳ್ನಗೆ ಅರಳುವುದನ್ನು ನೋಡಿ ತೃಪ್ತಿಯನ್ನು ಕಾಣುವಂತಾಗಬೇಕೆಂದು ತಿಳಿಸಿದರು.

ಉಪನ್ಯಾಸಕಿ ಶ್ರೀಮತಿ.ರೂಪಾ ಕೆ. ಅವರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶ್ರೀಮತಿ.ಉಷಾ ಎಚ್. ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಕುಂಜಿಬೆಟ್ಟಿನ ಶಾರದಾ ವಸತಿಶಾಲೆಯ ನಿರ್ದೇಶಕರಾದ ಶ್ರೀ.ವಿದ್ಯಾವಂತ ಆಚಾರ್ಯ ಅವರು ಶುಭಾಶಂಸನೆಗೈದರು. ವಿದ್ಯಾರ್ಥಿ ಶಿಕ್ಷಕರಾದ ಶ್ರೀ.ಧನರಾಜ್ ಭಂಡಾರಿ, ಶ್ರೀ.ವಿಕಾಸ್ ಮೇಟಿ, ಶ್ರೀ.ಗಣೇಶ್ ನಾಯ್ಕ ಅವರು ಅತಿಥಿಗಳಿಗೆ ಪುಷ್ಪ ಸಮರ್ಪಣೆ ಮಾಡಿದರು. ಶ್ರೀಮತಿ ಸಂಧ್ಯಾ ಅವರು ‘ಇಪ್ಪತ್ತೊಂದನೇ ಶತಮಾನದಲ್ಲಿ ಶಿಕ್ಷಕ’ ಎಂಬ ವಿಷಯವನ್ನು ಕುರಿತು ಪ್ರಬಂಧ ಮಂಡಿಸಿದರು.

ಕು.ಅಂಜಲಿ ಭಟ್ ಅವರು ಡಾ: ರಾಧಾಕೃಷ್ಣನ್ ಅವರ ಜೀವನ ಸಾಧನೆಗೆ ಸಂಬಂಧಿಸಿದಂತೆ ‘ಪವರ್ ಪಾಯಿಂಟ್ ಪ್ರಸೆಂಟೇಶನ್’ ಮಾಡಿದರು. ಶ್ರೀ.ರವಿನಾಯ್ಕ ಮತ್ತು ಬಳಗ ಹಾಗೂ ಶ್ರೀಮತಿ ಅಶ್ವಿನಿ ಮತ್ತು ಬಳಗದವರು ಅನುಕ್ರಮವಾಗಿ ಕುವೆಂಪು ವಿರಚಿತ ‘ತನುವು ನಿನ್ನದು’ ಹಾಗೂ ‘ಅಂತರ ತಮನೀಗುರು’ ಎಂಬ ಗೀತೆಯನ್ನು ಹಾಡಿ ರಂಜಿಸಿದರು. ಉಪನ್ಯಾಸಕಿ ಶ್ರೀಮತಿ ಧನಲಕ್ಷ್ಮೀ ಅವರು ಧನ್ಯವಾದ ಸಮರ್ಪಿಸಿದರು. ಕು:ಹೇಮಲತಾ ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಸಮಾಜ ವಿಜ್ಞಾನ ಬೋಧನ ವಿಧಾನ ವಿಭಾಗದ ಕಾರ್ಯಕ್ರಮ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಸಮಾಜವಿಜ್ಞಾನ ಬೋಧನ ವಿಧಾನ ವಿಭಾಗದ ವಿದ್ಯಾರ್ಥಿ ಶಿಕ್ಷಕರ ವತಿಯಿಂದ ವೈವಿಧ್ಯಮಯ ಚಟುಚಟಿಕೆಗಳ ಕಾರ್‍ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಕಾರ್‍ಯಕ್ರಮzಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ಇತಿಹಾಸ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀ.ಗುರುಮೂರ್ತಿ ಕೆ.ಕೆ. ಅವರು ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು.

ಪ್ರೊ: .ಗುರುಮೂರ್ತಿ ಅವರು ಈ ಸಂದರ್ಭದಲ್ಲಿ ‘ಬದಲಾಗುತ್ತಿರುವ ಇತಿಹಾಸದ ಪರಿಕಲ್ಪನೆ’ ಎಂಬ ವಿಷಂiiವನ್ನು ಕುರಿತು ಉಪನ್ಯಾಸವನ್ನು ನೀಡಿದರು. ಭಾರತೀಯ ಐತಿಹಾಸಿಕ ಪರಂಪರೆ, ವಿವಿಧ ಕಾಲಘಟ್ಟಗಳಲ್ಲಿ ಭಾರತೀಯ ಇತಿಹಾಸದ ವ್ಯಾಖ್ಯಾನವು ಪಡೆದುಕೊಂಡ ಅರ್ಥದ ಸ್ವರೂಪ, ಇತಿಹಾಸಕಾರರ ವಿಭಿನ್ನ ದೃಷ್ಟಿಕೋನದ ಗ್ರಹಿಕೆಯ ನೆಲೆಗಳನ್ನು ಸೂಕ್ತ ನಿದರ್ಶನಗಳೊಂದಿಗೆ ಶ್ರೀಯುತರು ವಿಶದಪಡಿಸಿದರು.

ತದನಂತರ ವಿದ್ಯಾರ್ಥಿ ಶಿಕ್ಷಕರು ದೇಶಭಕ್ತಿಗೀತೆಯ ಗಾಯನ, ಭಾರತದ ಸಮಕಾಲೀನ ಸಮಾಜ ವಿಜ್ಞಾನಿಗಳನ್ನು ಕುರಿತ ಪ್ರಬಂಧ ಮಂಡನೆ, ಮೂಕಾಭಿನಯ, ಜವಾಹರಲಾಲ್ ನೆಹರು ಅವರ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿ ಸಮೀಕ್ಷೆ, ಭಾರತದ ರಾಷ್ಟ್ರಗೀತೆಯ ಅರ್ಥವನ್ನು ಭಾಷಣ, ಜಾಗತಿಕ ದುರಂತಗಳನ್ನು ಕುರಿತ ಸ್ಲೈಡ್ ಶೋ, ‘ಪ್ರಾದೇಶಿಕ ವೈವಿಧ್ಯ’ಕ್ಕೆ ಸಂಬಂಧಿಸಿದ ಫ್ಯಾಷನ್ ಶೋ, ಭ್ರಷ್ಟಾಚಾರವನ್ನು ಕುರಿತ ಕಿರುಚಿಂತನೆ ಮೊದಲಾದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ “ವಸ್ತುನಿಷ್ಠವಾಗಿ ಇತಿಹಾಸದ ಗ್ರಹಿಕೆ ಕಷ್ಟಸಾಧ್ಯವಾದರೂ ಅದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು. ಸ್ಥಳೀಯ ಇತಿಹಾಸದ ಅಧ್ಯಯನಕ್ಕೂ ವಿಶೇಷ ಒತ್ತು ನೀಡಬೇಕು. ಈ ದಿಸೆಯಲ್ಲಿ ಅಧ್ಯಯನಕ್ಕೆ ಲಭ್ಯವಿರುವ ಸ್ಮಾರಕಗಳು ಅಥವಾ ಪ್ರಾಚ್ಯವಸ್ತುಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ಶಿಕ್ಷಕಿ ಕು: ಪ್ರೀತಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶ್ರೀಮತಿ ರಂಜಿತಾ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಶ್ರೀಮತಿ ನಿವೇದಿತಾ ಸಿ. ದೇವಾಡಿಗ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ನಿರ್ಮಲ ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಇಂಗ್ಲಿಷ್ ಬೋಧನ ವಿಧಾನ ಕಾರ್ಯಕ್ರಮ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಇಂಗ್ಲಿಷ್ ಬೋಧನ ವಿಧಾನದ ವಿದ್ಯಾರ್ಥಿ ಶಿಕ್ಷಕರ ವತಿಯಿಂದ ಕಾರ್‍ಯಕ್ರಮವೈವಿಧ್ಯವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಸಮಾರಂಭದಲ್ಲಿ ತೆಂಕನಿಡಿಯೂರಿನ ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ.ಪ್ರಸಾದ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು.

ಶ್ರೀ.ಪ್ರಸಾದ್ ರಾವ್ ಅವರು ಈ ಸಂದರ್ಭದಲ್ಲಿ – ‘ಪ್ರಾದೇಶಿಕ ಭಾಷಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯ ಬೋಧನೆ’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡುತ್ತಾ “ಶಿಕ್ಷಕರು ಎಂದಿಗೂ ಕೇವಲ ಬೋಧನ ವಿಧಾನ ಶಾಸ್ತ್ರಕ್ಕೇ ಜೋತು ಬೀಳುತ್ತಾ ಅದಕ್ಕೇ ಅಂಟಿಕೊಂಡು ಕೂರಬಾರದು. ಸಾಂಪ್ರದಾಯಕವಾದ ಬೋಧನ ಕ್ರಮವನ್ನು ಭಂಜಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ಸೃಜನಶೀಲವಾದ ಬೋಧನೆಗೆ ಒತ್ತು ನೀಡಬೇಕು. ತನ್ಮೂಲಕ ತಾವು ಕಲಿಸುವ ವಿಷಯದಲ್ಲಿ ಪ್ರಭುತ್ವವನ್ನು ಸಾಧಿಸಬೇಕು. ಬೋಧನ ಶಾಸ್ತ್ರಕ್ಕಿಂತ ಬೋಧನೆಯ ಪರಿಣಾಮವೇ ಅಂತಿಮ” ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ – “ ಭಾಷೆ, ಸಾಹಿತ್ಯ ಅಥವಾ ಯಾವುದೇ ಬೋಧನ ವಿಷಯದ ಜೊತೆ ಶಿಕ್ಷಕರ ಸಂಬಂಧ ಯಾವ ರೀತಿಯದು ಎಂಬುದು ಬಹುಮುಖ್ಯ. ಯಾಂತ್ರಿಕವಾದ ಸಂಬಂಧ ಬೇರ್ಪಟ್ಟರೆ ಅದು ಕೇವಲ ಪರೀಕ್ಷಾಸಿದ್ಧತೆಗಷ್ಟೇ ಸೀಮಿತಗೊಳ್ಳುತ್ತದೆ. ವಿಚ್ಚೇದಿತವಾದ ಸಂಬಂಧ ಉಂಟಾದರೆ ಅದು ನಿರಾಶೆ, ಹತಾಶೆ ಅಥವಾ ಸಿನಿಕತನಕ್ಕೆ ಕಾರಣವಾಗಬಹುದು. ಅನುರಾಗದ ಅನುಬಂಧವೇರ್ಪಟ್ಟಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯನ್ನು ಮೂಡಿಸಬಹುದು. ಅಂದರೆ ಬೋಧನೆಯಲ್ಲಿ ಒಲವು ಅಥವಾ ರುಚಿಯನ್ನು ಶಿಕ್ಷಕರು ರೂಢಿಸಿಕೊಂಡು ಬೋಧನ ವಿಷಯದೊಂದಿಗೆ ಕರುಳು ಬಳ್ಳಿಯ ಸಂಬಂಧವನ್ನು ಹೊಂದಿದಾಗ ಮಾತ್ರ ಬೋಧನೆ ಪ್ರಭಾವಶಾಲಿಯಾಗುತ್ತದೆ.” ಎಂದು ತಿಳಿಸಿದರು.

ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿಶಿಕ್ಷಕರು ಇಂಗ್ಲಿಷ್ ಭಾಷಾ ಬೋಧನೆಗೆ ಪೂರಕವಾದ ಮೂಕಾಭಿನಯ, ಪ್ರಬಂಧ ಮಂಡನೆ, ಸಮೂಹ ಗಾಯನ, ಪಠ್ಯ ಆಧಾರಿತ ಪ್ರಹಸನ, ಭಾಷಾ ಕಾರ್ಯಗಳು, ಷೇಕ್ಸ್‌ಪಿಯರ್‌ನ ಸುಪ್ರಸಿದ್ಧ ದುರಂತ ನಾಟಕ – ‘ಮ್ಯಾಕ್‌ಬೆತ್’ನ ಆಯ್ದಭಾಗ ಮೊದಲಾದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು.

ವಿದ್ಯಾರ್ಥಿ ಶಿಕ್ಷಕಿ ಶ್ರೀಮತಿ.ವಯೋಲಾ ಮತ್ತು ಬಳಗದವರು ಪ್ರಾರ್ಥನಾಗೀತೆ ಹಾಡಿದರು. ಕು: ಆಶಾ ಟಿ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ ಕೆ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕು.ದೀಪಶ್ರೀ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ.ಲವೀನಾ ಜಾನೆಟ್ ಅರೋಝಾ ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಡಾ: ಬಿ.ಎಲ್. ಶಂಕರನಾರಾಯಣ ಸಂಸ್ಮರಣ ಉಪನ್ಯಾಸ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಸಂಸ್ಥೆಯ ಪೂರ್ವಪ್ರಾಚಾರ್ಯರಾಗಿದ್ದ ದಿ: ಡಾ: ಬಿ.ಎಲ್. ಶಂಕರನಾರಾಯಣ ಸಂಸ್ಮರಣ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ‘ದೂರ ಶಿಕ್ಷಣ’ ಎಂಬ ವಿಷಯವನ್ನು ಕುರಿತು ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಉಪನ್ಯಾಸ ಕಾರ್‍ಯಕ್ರಮದಲ್ಲಿ ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಶಿಕ್ಷಣ ಕೇಂದ್ರದ ಸಹಾಯಕ ನಿರ್ದೇಶಕರಾದ ಡಾ: ಎಂ. ಷಣ್ಮುಗಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು.

ಡಾ: ಷಣ್ಮುಗಂ ಅವರು ಭಾರತದಲ್ಲಿ ದೂರಶಿಕ್ಷಣದ ಇತಿಹಾಸ, ಹಿನ್ನೆಲೆ, ಅಗತ್ಯಗಳನ್ನು ವಿಶದ ಪಡಿಸಿ ಈ ದಿಸೆಯಲ್ಲಿ ಇಗ್ನೋದ ಮೂಲಕ ಲಭ್ಯವಿರುವ ವಿವಿಧ ಕೋರ್ಸುಗಳ ಬಗ್ಗೆ, ಶುಲ್ಕ ಸ್ವರೂಪದ ಬಗ್ಗೆ ಮಾಹಿತಿ ನೀಡಿ ದೂರ ಶಿಕ್ಷಣದ ಪ್ರಸಾರದಲ್ಲಿ ಮುಕ್ತವಿಶ್ವವಿದ್ಯಾಲಯದ ಪಾತ್ರವನ್ನು ಮನಗಾಣಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ – “ ಒಂದು ಕಾಲದಲ್ಲಿ ಶಿಕ್ಷಣ ಕೇವಲ ಪ್ರತಿಷ್ಠಿತರ ಸೊತ್ತಾಗಿತ್ತು. ಈಗ ‘ಸಮೂಹ ಶಿಕ್ಷಣ’ಕ್ಕೆ ಎಲ್ಲೆಡೆ ಮಾನ್ಯತೆ ಲಭಿಸುತ್ತಿದೆ. ಶಿಕ್ಷಣದಿಂದ ವಂಚಿತರಾದವರನ್ನು ತಲುಪಲು ದೂರ ಶಿಕ್ಷಣ ಒಂದು ವರದಾನ. ಸಾಂಪ್ರದಾಯಕ ಶಿಕ್ಷಣದಿಂದ ಸಾಧ್ಯವಾಗದೇ ಇರುವುದು ದೂರ ಶಿಕ್ಷಣದಿಂದ ಸಾಧಿತವಾಗುತ್ತಿದೆ. ಇಂದು ಇದರಲ್ಲಿ ತಾತ್ವಿಕ ಮತ್ತು ಪ್ರಾಯೋಗಿಕ ವಿಷಯಗಳೆರಡಕ್ಕೂ ಮಹತ್ವವಿದೆ. ಶಿಕ್ಷಕರು, ವಿದ್ಯಾರ್ಥಿಗಳು ‘ಅನಾಸಕ್ತಿಯೋಗ’ದಿಂದ ಹೊರಬಂದು ಪ್ರಾಮಾಣಿಕತೆಯಿಂದ, ಆತ್ಮಸಂತೃಪ್ತಿಯಿಂದ, ಸ್ವಯಂ ಆರ್ಜನೆಯಿಂದ ಕಲಿಯಲು ಇಲ್ಲಿರುವ ಅನಂತ ಅವಕಾಶಗಳನ್ನು ಬಳಸಿಕೊಳ್ಳಬೇಕು.” ಎಂದು ತಿಳಿಸಿದರು.

ಉಪನ್ಯಾಸಕ ಹಾಗೂ ಕಾಲೇಜಿನ ಇಗ್ನೋ ಅಧ್ಯಯನ ಕೇಂದ್ರದ ಸಂಚಾಲಕ ಶ್ರೀ.ಜಿ.ರಾಘವೇಂದ್ರ ಹೇರ್ಳೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಸಂಚಾಲಕಿ ಶ್ರೀಮತಿ. ರೂಪಾ ಕೆ. ಅವರು ಅತಿಥಿಗಳಿಗೆ ಪುಷ್ಪಗುಚ್ಚ ನೀಡಿ ಗೌರವಿಸಿದರು. ಪೂರ್ವ ಸಂಚಾಲಕರಾದ ಶ್ರೀ.ಬಿ.ಮುರಳೀಧರ ಅವರು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ. ಉಷಾ ಹೆಚ್ ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಸಾಲಿಗ್ರಾಮ ‘ಮಾನಸ’ ಸಂಸ್ಥೆಗೆ ವಿದ್ಯಾರ್ಥಿ ಶಿಕ್ಷಕರ ಭೇಟಿ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಶಿಕ್ಷಕರು ಈಚೆಗೆ ಶೈಕ್ಷಣಿಕ ಭೇಟಿಯ ಅಂಗವಾಗಿ ಸಾಲಿಗ್ರಾಮದಲ್ಲಿರುವ ಡಾ: ಕೆ.ಶಿವರಾಮ ಕಾರಂತರ ಸ್ಮೃತಿಭವನ ‘ಮಾನಸ ಸಂಸ್ಥೆ’ ಗೆ ಭೇಟಿ ನೀಡಿ ಅಲ್ಲಿನ ಕಾರ್‍ಯಕಲಾಪಗಳನ್ನು ವೀಕ್ಷಿಸಿ ಕಾರಂತರ ಬದುಕು-ಬರೆಹ ವ್ಯಕ್ತಿತ್ವದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಪಡೆದರು.

ಮಾನಸ ಸಂಸ್ಥೆಯ ಸಂಚಾಲಕರಾದ ಶ್ರೀಮತಿ.ಪಿ.ಮಾಲಿನಿ ಮಲ್ಯ ಅವರು ವಿದ್ಯಾರ್ಥಿ ಶಿಕ್ಷಕರನ್ನು ಸ್ವಾಗತಿಸಿ ಸಂಸ್ಥೆಯ ಇತಿಹಾಸ, ಸ್ವರೂಪ, ಕಾರ್‍ಯಚಟುವಟಿಕೆಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಅವರು ಶಿವರಾಮ ಕಾರಂತರ ವಸ್ತು ಸಂಗ್ರಹಾಲಯ, ಕಾರಂತರ ಕಾದಂಬರಿ ಕಲಾ ಲೋಕ, ಕಾರಂತ ರಂಗಮಂದಿರ, ಕಾರಂತ ಯಕ್ಷಗಾನ ಕೇಂದ್ರ, ಗ್ರಂಥಭಂಡಾರ ಮೊದಲಾದ ಕಡೆ ವಿದ್ಯಾರ್ಥಿಗಳನ್ನು ಕರೆದೊಯ್ದು ಕಾರಂತರ ವ್ಯಕ್ತಿವೈಶಿಷ್ಟ್ಯ, ಮೇರು ಪ್ರತಿಭೆ, ಬಹುಮುಖ ಆಸಕ್ತಿಯನ್ನು ಮನದಟ್ಟು ಮಾಡಿಸಿದರು, ಹಾಗೂ ಕೇಂದ್ರದ ವತಿಯಿಂದ ಪ್ರಕಟನೆಗೊಳ್ಳಲಿರುವ ಕಾರಂತರ ಅಪ್ರಕಟಿತ ಬರೆಹಗಳ ಬಗ್ಗೆ ತಿಳಿಸಿದರು.

ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಕುಶಾಲಿನಿ ಸಿ.ಎನ್. ಅವರು ಧನ್ಯವಾದ ಸಮರ್ಪಿಸಿದರು.

‘ಸಮುದಾಯದೊಂದಿಗೆ ಸೇವೆ’ ಕಾರ್ಯಕ್ರಮ

  ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಶಿಕ್ಷಕರು ಈಚೆಗೆ ‘ಸಮುದಾಯದೊಂದಿಗೆ ಸೇವೆ’ ಕಾರ್ಯಕ್ರಮದ ಅಂಗವಾಗಿ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಅಂಗ ಸಂಸ್ಥೆಯಾದ ‘ಪ್ರಹ್ಲಾದ ಗುರುಕುಲ’ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.

ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಬಲರಾಮ ಕಲ್ಕೂರ ಅವರು ವಿದ್ಯಾರ್ಥಿ ಶಿಕ್ಷಕರಿಗೆ ಗುರುಕುಲ ಸಂಸ್ಥೆಯ ಇತಿಹಾಸ, ವೈಶಿಷ್ಟ್ಯ, ಪಠ್ಯಕ್ರಮ, ಮೌಲ್ಯಮಾಪನ, ಸಹಪಠ್ಯ ಚಟುವಟಿಕೆಗಳು, ವಿದ್ಯಾರ್ಥಿಗಳ ಆಯ್ಕೆಯ ಕ್ರಮ, ಸಂಸ್ಥೆಯ ನೀತಿ ನಿಬಂಧನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣಗಳ ಸಮನ್ವಯ ದೃಷ್ಟಿಯನ್ನು ಇಲ್ಲಿ ಕಾಣಬಹುದಾಗಿದೆ. ಎಂದು ತಿಳಿಸಿದರು. ಹಾಗೂ ಸಂಸ್ಥೆಯ ಕಾರ್‍ಯವೈಖರಿಯನ್ನು ಅರಿಯಲು ಸ್ವಯಂ ವೀಕ್ಷಣೆಗೆ ಅವಕಾಶ ಕಲ್ಪಿಸಿದರು.

ಈ ಸಂದರ್ಭದಲ್ಲಿ ಸಮುದಾಯ ಸೇವೆಯ ಅಂಗವಾಗಿ ವಿದ್ಯಾರ್ಥಿ ಶಿಕ್ಷಕರು ಗುರುಕುಲದ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಿ, ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಪ್ರಸ್ತುತಪಡಿಸಿ ರಂಜಿಸಿದರು. ಗುರುಕುಲದ ವಿದ್ಯಾರ್ಥಿಗಳೂ ಸಹ ವೈವಿಧ್ಯಪೂರ್ಣವಾದ ಕಾರ್‍ಯಕ್ರಮಗಳನ್ನು ನೀಡಿದರು.

ಅಧ್ಯಾಪಕ ಸಲಹಾಕಾರರಾದ ಉಪನ್ಯಾಸಕ ಶ್ರೀ.ಜಿ.ರಾಘವೇಂದ್ರ ಹೇರ್ಳೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕು:ಹೇಮಲತಾ ಅವರು ಕಾರ್ಯಕ್ರಮ ನಿರ್ವಹಿಸಿದರು. ಕು:ಜಯಂತಿ ಮರಾಠಿ ಅವರು ಧನ್ಯವಾದ ಸಮರ್ಪಿಸಿದರು.

‘ನಮ್ಮ ಭೂಮಿ’ ಸಂಸ್ಥೆಗೆ ವಿದ್ಯಾರ್ಥಿ ಶಿಕ್ಷಕರ ಭೇಟಿ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಶಿಕ್ಷಕರು ಈಚೆಗೆ ಶೈಕ್ಷಣಿಕ ಭೇಟಿಯ ನಿಮಿತ್ತ ಕುಂದಾಪುರದ ಕನ್ಯಾನದಲ್ಲಿ ಇರುವ ‘ನಮ್ಮ ಭೂಮಿ’ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಕಾರ್‍ಯಕಲಾಪಗಳನ್ನು ವೀಕ್ಷಿಸಿ, ಅವರು ನಡೆಸುವ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

‘ನಮ್ಮ ಭೂಮಿ’ ಸಂಸ್ಥೆಯ ಶ್ರೀ ಗಣಪತಿ ಅವರು ವಿದ್ಯಾರ್ಥಿ ಶಿಕ್ಷಕರಿಗೆ ಸಂಸ್ಥೆಯ ಹುಟ್ಟು, ಅದಕ್ಕೆ ಪ್ರೇರಕವಾದ ಸಂಗತಿಗಳು, ಅದರ ಕಾರ್‍ಯವ್ಯಾಪ್ತಿ, ಧ್ಯೇಯೋದ್ದೇಶಗಳು, ಕಾರ್‍ಯಚಟುವಟಿಕೆಯ ವಿಧಿ ವಿಧಾನಗಳು, ಮಕ್ಕಳು ಹಕ್ಕುಗಳ ಪಾಲನೆಗಾಗಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಕಾರ್‍ಯಕ್ರಮಗಳನ್ನು ನಿರೂಪಿಸಿದರು.

ತದನಂತರ ವಿದ್ಯಾರ್ಥಿ ಶಿಕ್ಷಕರು ನಮ್ಮ ಭೂಮಿಯ ಸಹಸಂಸ್ಥೆ ‘ನಳಂದ’ ವಿದ್ಯಾ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಬಳಿಕ ವಿದ್ಯಾರ್ಥಿಶಿಕ್ಷಕರು ಅಲ್ಲಿನ ವೃತ್ತಿ ತರಬೇತಿ ಸಂಸ್ಥೆ, ಕಂಪ್ಯೂಟರ್ ಪ್ರಯೋಗಾಲಯ, ಗೋಶಾಲೆಗಳಿಗೆ ತೆರಳಿ ಸೂಕ್ತ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಶಿಕ್ಷಕರೊಂದಿಗೆ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ.ಕುಶಾಲಿನಿ ಸಿ.ಎನ್., ಶ್ರೀಮತಿ.ರೂಪಾ ಕೆ ಮತ್ತು ಶ್ರೀ.ಜಿ.ರಾಘವೇಂದ್ರ ಹೇರ್ಳೆ ಅವರು ಉಪಸ್ಥಿತರಿದ್ದರು.

ಕನ್ನಡ ಬೋಧನ ವಿಧಾನ ಕಾರ್ಯಕ್ರಮ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಕಾಲೇಜಿನ ಪೂರ್ವ ಪ್ರಾಚಾರ್‍ಯರಾದ ದಿ: ಪ್ರೊ.ಟಿ.ವಿಶ್ವನಾಥ್ ಅವರ ಸಂಸ್ಮರಣ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಉದ್ಯೋಗಾಧಿಕಾರಿಗಳೂ ಹಾಗೂ ಆಪ್ತಮಾಲೋಚನ ವಿಭಾಗದ ಮುಖ್ಯಸ್ಥರೂ ಆದ ಪ್ರೊ: ಶಾಲಿನಿ ಶರ್ಮ ಅವರು ‘ಶಾಲೆಗಳಲ್ಲಿ ಆಪ್ತ ಸಮಾಲೋಚನೆ’ ಎಂಬ ವಿಷಯವನ್ನು ಕುರಿತು ಉಪನ್ಯಾಸವನ್ನು ನೀಡಿದರು. ಕಾಲೇಜಿನ ಪ್ರಾಚಾರ್‍ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರೊ: ಶಾಲಿನಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಆಪ್ತ ಸಮಾಲೋಚನೆ ಪರಿಕಲ್ಪನೆಯ ಅರ್ಥವ್ಯಾಪ್ತಿ, ಶಾಲೆಗಳಲ್ಲಿ ಮಕ್ಕಳು ಎದುರಿಸುವ ವಿವಿಧ ಬಗೆಯ ಸಾಮಾನ್ಯ ಸಮಸ್ಯೆಗಳು, ಶಾಲೆಗಳಲ್ಲಿ ಶಿಕ್ಷಕರು ಆಪ್ತಸಮಾಲೋಚನೆಯ ಬಗ್ಗೆ ಆಧ್ಯತೆ ನೀಡಬೇಕಾದ ಅಗತ್ಯ, ಈ ದಿಸೆಯಲ್ಲಿ ಅವರಿಗೆ ಆವಶ್ಯಕವಾದ ತರಬೇತಿ, ಆಪ್ತ ಸಮಾಲೋಚನೆ ಅಗತ್ಯವಿರುವ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚನೆಯ ವಿವಿಧ ಮಾರ್ಗೋಪಾಯಗಳು, ಆಪ್ತ ಸಮಾಲೋಚನೆ ನಡೆಸುವಾಗ ಶಿಕ್ಷಕರು ಪರಿಗಣಿಸಬೇಕಾದ ವಿಚಾರಗಳು, ಆಪ್ತ ಸಮಾಲೋಚನ ಪ್ರತಿಕ್ರಿಯೆಯ ವಿವಿಧ ಹಂತಗಳನ್ನು ಸವಿಸ್ತಾರವಾಗಿ ತಮ್ಮ ವೃತ್ತಿಜೀವನದ ಅನುಭವಗಳ ಹಿನ್ನೆಲೆಯಲ್ಲಿ ವಿಶದ ಪಡಿಸಿದರು

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್‍ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ “ಯಾವುದೇ ಸಮಸ್ಯೆಯೂ ದಿಢೀರಾಗಿ ಉದ್ಭವಿಸುವುದಿಲ್ಲ. ಉಲ್ಬಣಿಸುವುದೂ ಇಲ್ಲ. ಅದು ಹಲವಾರು ವರ್ಷಗಳಿಂದ, ಕ್ರಿಯೆ ಪ್ರತಿಕ್ರಿಯೆಗಳಿಂದ ಬೆಳೆದು ಬಂದಿರುತ್ತದೆ. ಒಬ್ಬನ ಸಮಸ್ಯೆ ಮತ್ತೊಬ್ಬನ ಸಮಸ್ಯೆ ಆಗುವುದಿಲ್ಲ. ನಮ್ಮ ಸಮಸ್ಯೆ ನಮಗೆ ಮಾತ್ರ ದೊಡ್ಡದಾಗಿರುತ್ತದೇ ವಿನಾ ಬೇರೆಯವರಿಗಲ್ಲ. ಅದು ಅವರಿಗೆ ಚಿಕ್ಕದಾಗಿ ತೋರಬಹುದು. ಸಮಸ್ಯಾಪರಿಹಾರದಲ್ಲಿ ಸಮಾಲೋಚಕನಷ್ಟೇ ಸಮಾಲೋಚನೆಗೆ ಒಳಪಡುವ ವ್ಯಕ್ತಿಯೂ ಮುಖ್ಯ. ಮಕ್ಕಳ ಸಮಸ್ಯೆಗಳ ಬಗ್ಗೆ, ಅವುಗಳ ಸ್ವರೂಪದ ಬಗ್ಗೆ ಶಿಕ್ಷಕರಲ್ಲಿ ಅವರ ಸ್ಥಾನದಲ್ಲಿ ನಿಂತು ಅರಿಯುವ ಅನುಭೂತಿ ಇರಬೇಕು” ಎಂದು ತಿಳಿಸಿದರು.

ಉಪನ್ಯಾಸದ ಬಳಿಕ ನಡೆದ ಸಂವಾದ ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿ ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ, ಕು:ಹನನ್ ಹಶ್ಮತ್, ಕು: ಪವಿತ್ರಾ ಕು:ಅನಿಷಾ ಶ್ರೀಮತಿ ಸಂಧ್ಯಾ, ಕು: ಅಖಿಲಾ, ಶ್ರೀಮತಿ ಜಾನೆಟ್, ಕು: ರಕ್ಷಿತಾ ಮೊದಲಾದವರು ಪಾಲ್ಗೊಂಡಿದ್ದರು.

ಉಪನ್ಯಾಸಕಿ ಶ್ರೀಮತಿ ಪ್ರೀತಿ ಎಸ್. ರಾವ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀಮತಿ ಧನಲಕ್ಷ್ಮಿ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ.ಕುಶಾಲಿನಿ ಸಿ.ಎನ್ ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಪ್ರತಿಭಾ ಪ್ರದರ್ಶನ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಪ್ರಸಕ್ತ ಸಾಲಿನ ಪ್ರಶಿಕ್ಷಣಾರ್ಥಿಗಳಿಗಾಗಿ ಪ್ರತಿಭಾ ಪ್ರದರ್ಶನ ಕಾರ್‍ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಪದ ಗೀತೆ, ಭಾವಗೀತೆ, ದೇಶಭಕ್ತಿ ಗೀತೆ, ಕೀರ್ತನೆ, ಚಿತ್ರಗೀತೆ, ನಾಡುನುಡಿ ಗೀತೆಗಳನ್ನು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಹಾಡಿ ರಂಜಿಸಿದರು. ಕೆಲವು ವಿದ್ಯಾರ್ಥಿ ಶಿಕ್ಷಕರು ಸ್ವರಚಿತ ಕವನಗಳನ್ನು ವಾಚಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು.

ಡಾ: ರಾವ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ – “ವಿದ್ಯಾರ್ಥಿ ಶಿಕ್ಷಕರು ಭಾವಗೀತೆಗಳನ್ನು ಹಾಡುವಾಗ ಗೀತರಚನೆಕಾರರ ಹೆಸರನ್ನು ಸ್ಮರಿಸಬೇಕು. ಜೊತೆಗೆ ಸಾಹಿತ್ಯಭಾಗ, ಭಾಷಾ ಶುದ್ಧಿ, ಶಬ್ದ ಶುದ್ಧಿಗಳೆಡೆಗೆ ಗಮನ ನೀಡಬೇಕು. ರಾಗ ತಾಳಗಳೇ ಪ್ರಧಾನವಾಗಿ ಸಾಹಿತ್ಯ ಗೌಣವಾಗಬಾರದು. ರಂಗದ ಮೇಲೆ ಪ್ರದರ್ಶನ ನೀಡುವಾಗ ಧ್ವನಿವಧಕವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಅರಿವೂ ಮುಖ್ಯ. ಈ ದಿಸೆಯಲ್ಲಿ ಒಳ್ಳೆಯ ಗಾಯಕರು ಹಾಡುವ ಮಾದರಿಯನ್ನು ಅನುಸರಿಬಹುದು. ಹಾಗೆಯೇ ಸ್ವರಚಿತ ಕವನ ವಾಚನ ಮಾಡುವಾಗ ಕವಿತೆಯ ಎಲ್ಲಾ ಸಾಲುಗಳನ್ನು ಎರಡೆರಡು ಬಾರಿ ಪುನರುಚ್ಛರಿಸಬೇಕಿಲ್ಲ. ಕವಿತೆಯ ಸಾರ ಅಡಗಿರುವ ತೀರಾ ಮುಖ್ಯವಾದ ಸಾಲನ್ನು ಬೇಕಾದರೆ ಎರಡು ಬಾರಿ ಹೇಳಬಹುದು. ಕವಿತೆಗಳಲ್ಲಿ ಸಾಮಾಜಿಕ ಸಂವೇದನೆ ಇರಬೇಕು. ಅವು ಕೇವಲ ಜೀವನಾನುಭವದ ನಿರೂಪಣೆಗಷ್ಟೇ ಸೀಮಿತಗೊಳ್ಳದೆ, ವಾಚ್ಯರೂಪದಲ್ಲಿರದೆ ಸೂಚ್ಯವಾಗಿದಷ್ಟೂ ಉತ್ತಮ. ಮೂರ್ತದಿಂದ ಅಮೂರ್ತದತ್ತ, ಅಮೃತಕ್ಕೆ ಹಾರುವ ಗರುಡದಂತೆ, ಉಪಮೆ, ರೂಪಕಗಳ ಮೂಲ;ಕ ಕವಿತೆ ಸಾಗಬೇಕು” ಎಂದು ತಿಳಿಸಿದರು ಹಾಗೂ ಗುಣಮಟ್ಟ್ಟ ಸುಧಾರಣೆಗೆ ರಚನಾತ್ಮಕವಾದ ಸಲಹೆಗಳನ್ನು ನೀಡಿದರು.

ವಿದ್ಯಾರ್ಥಿ ಶಿಕ್ಷಕಿ ಕು: ದೀಪಶ್ರೀ ಅವರು ಪ್ರಾರ್ಥನಾಗೀತೆ ಹಾಡಿದರು. ಕು:ಹನನ್ ಹಸ್ಮತ್ ಆಲಿ ಸಯ್ಯದ್ ಅವರು ಸ್ವಗತಿಸಿದರು. ರ್ಸರೀಮತಿ ಪ್ರೀತಿ ಅವರು ಧನ್ಯವಾದ ಸಮರ್ಪಿಸಿದರು. ಕು: ಶ್ರುತಿ ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಇಗ್ನೋ ಬಿ.ಎಡ್. ವ್ಯಾಸಂಗ ಪರಿಚಯ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಗ್ನೋ ಬಿ.ಎಡ್ ದೂರಶಿಕ್ಷಣ ಅಧ್ಯಯನ ಕೇಂದ್ರ ೧೩೨೧ರ ವತಿಯಿಂದ ಈಚೆಗೆ ಪ್ರಥಮ ವರ್ಷದ ಪ್ರಶಿಕ್ಷರ್ಣಾರ್ಥಿಗಳಿಗೆ ಬಿ.ಎಡ್. ವ್ಯಾಸಂಗ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಇಗ್ನೋ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಡಾ: ಎಂ. ಷಣ್ಮುಗಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು.

ಡಾ: ಷಣ್ಮುಗಂ ಅವರು ಈ ಸಂದರ್ಭದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ನವದೆಹಲಿ ಹಾಗೂ ಪ್ರಾದೇಶಿಕ ಕೇಂದ್ರ ಬೆಂಗಳೂರು ಇವರು ಇಗ್ನೋದ ಕಾರ್‍ಯ ಸ್ವರೂಪ, ಬಿ.ಎಡ್ ವ್ಯಾಸಂಗ ವೈಶಿಷ್ಟ್ಯ, ಪರೀಕ್ಷಾ ಕ್ರಮ, ನಿಯೋಜಿತ ಕಾರ್ಯಗಳು, ದಾಖಲಾತಿ ಪ್ರಕ್ರಿಯೆ, ಕೇಂದ್ರದಲ್ಲಿ ಲಭ್ಯವಿರುವ ವಿವಿಧ ಕೋರ್ಸುಗಳು ಇವುಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಬಿ.ಎಡ್ ಅಧ್ಯಯನ ಕೇಂದ್ರದ ಇತಿಹಾಸ, ಕೇಂದ್ರದ ಕಾರ್ಯವೈಖರಿ, ವಿದ್ಯಾರ್ಥಿ ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಬಗೆ, ದೂರಶಿಕ್ಷಣ ಅಧ್ಯಯನದಲ್ಲಿ ಪ್ರಶಿಕ್ಷಣಾರ್ಥಿಗಳು ಪಾಲಿಸಬೇಕಾದ ಶಿಸ್ತು ನಿಬಂಧನೆಗಳನ್ನು, ಸಂಸ್ಥೆಯ ಮೂಲಕ ಅವರಿಗೆ ಸಿಗಬಹುದಾದ ಕಲಿಕೆಯ ಸವಲತ್ತುಗಳನ್ನು ವಿಶದ ಪಡಿಸಿದರು.

ಅಧ್ಯಯನ ಕೇಂದ್ರದ ಸಂಚಾಲಕ ಶ್ರೀ.ಜಿ.ರಾಘವೇಂದ್ರ ಹೇರ್ಳೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶೈಕ್ಷಣಿಕ ಸಮಾಲೋಚನಕಾರರಾದ ಶ್ರೀ ಪುಂಡರೀಕಾಕ್ಷ ಕೊಡಂಚ ಅವರು ಅತಿಥಿಗಳಿಗೆ ಪುಷ್ಪಗುಚ್ಚ ಮತ್ತು ಸ್ಮರಣಿಕೆ ನೀಡಿದರು. ಶ್ರೀ ರಾಮಕೃಷ್ಣ ಪೈ ಅವರು ಧನ್ಯವಾದ ಸಮರ್ಪಿಸಿದರು. ಸಹಾಯಕ ಸಂಚಾಲಕಿ ಶ್ರೀಮತಿ ರೂಪಾ ಕೆ. ಅವರು ಕಾರ್‍ಯಕ್ರಮ ನಿರ್ವಹಿಸಿದರು.

ಪ್ರೊ: ಒ.ಎಸ್. ಅಂಚನ್ ಸಂಸ್ಮರಣ ಉಪನ್ಯಾಸ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದ ಪ್ರೊ: ಒ.ಎಸ್. ಅಂಚನ್ ಸಂಸ್ಮರಣ ಉಪನ್ಯಾಸವನ್ನು ಆಯೋಜಿಸಲಾಗಿದ್ದು ‘ಶಾಲಾ ಶಿಕ್ಷಣದಲ್ಲಿ ಸಂರಚನವಾದ’ ಎಂಬ ವಿಷಯವನ್ನು ಕುರಿತು ಮಂಗಳೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ: ಎಚ್.ಕುಮಾರ ಸ್ವಾಮಿ ಅವರು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಡಾ: ಕುಮಾರ ಸ್ವಾಮಿ ಅವರು ಮಾತನಾಡುತ್ತಾ- “ ಕಲಿಕಾದಾರರು ತಮ್ಮ ಜ್ಞಾನದ ರಚನೆ, ಪುನಾರಚನೆಯಲ್ಲಿ ತೊಡಗುವಂತಹ ಕಲಿಕೆಯ ಅನುಭವಗಳನ್ನು ನೀಡುವುದರಿಂದ ಅರ್ಥಪೂರ್ಣ ಕಲಿಕೆ ಸಾಧ್ಯ. ಕಲಿಕೆಯೆಂದರೆ ಕೇವಲ ಹೊರಗಿನಿಂದ ಜ್ಞಾನ ಪಡೆಯುವಂತದ್ದಲ್ಲ. ಹೊರಗೆ ಲಭ್ಯವಿರುವುದನ್ನು ಕಲಿಕೆದಾರನು ತನ್ನ ಅನುಭವಗಳಿಗೆ ಸಂಬಂಧೀಕರಿಸುವುದು ಮುಖ್ಯವಾಗುತ್ತದೆ. ಇದನ್ನೆ ಸಂರಚನವಾದ ಎಂದು ಕರೆಯಬಹುದು. ಮಾಹಿತಿಗಳ ಬೆನ್ನು ಹತ್ತುವುದಕ್ಕಿಂತ ಜ್ಞಾನವನ್ನು ಕಟ್ಟಿಕೊಳ್ಳುವುದು ಮುಖ್ಯ. ಬೋಧನೆಯು ಕಲಿಕೆ ಅನುಕೂಲಿಸುವತ್ತ ಸಾಗಬೇಕು. ಸಂರಚನವಾದದಲ್ಲಿ ಕಲಿಕೆದಾರರ ಕ್ರಿಯಾಶೀಲ ತೊಡಗಿಕೊಳ್ಳುವಿಕೆಗೆ, ಕಲಿಕೆಯ ಸ್ವಾಯತ್ತತೆಗೆ ಆದ್ಯತೆ ನೀಡಲಾಗುತ್ತದೆ. ಕಲಿಕೆ ಎಷ್ಟು ಎಂಬಲ್ಲಿಂದ ಕಲಿಕೆ ಹೇಗೆ ಎಂಬಲ್ಲಿಗೆ ಸಾಗಬೇಕು. ಕಲಿಯಲು ಕಲಿಯುವುದು ಇದರ ವಿಶೇಷತೆ. ಮಾಹಿತಿ ಸಂಗ್ರಹಣೆ ಹಾಗೂ ನೆನಪಿಸಿಕೊಳ್ಳುವುದರ ಬದಲಾಗಿ ಚಟುವಟಿಕೆಗಳ ಮೂಲಕ ಅಮೂರ್ತ ಪರಿಕಲ್ಪನೆಗಳು ಮಾನಸಿಕ ಪ್ರತಿನಿಧಿತ್ವವನ್ನು ಪಡೆದುಕೊಳ್ಳುವುದು ಇಲ್ಲಿ ಕಂಡುಬರುತ್ತದೆ. ತೊಡಗಿಸಿಕೊಳ್ಳುವಿಕೆ, ಪರಿಶೋಧನೆ, ವಿವರಣೆ, ವಿಸ್ತರಣೆ, ಮೌಲ್ಯಮಾಪನ ಎಂಬ ಐದು ಹಂತಗಳಲ್ಲಿ ಈ ಸಿದ್ಧಾಂತವು ನುಷ್ಠಾನಕ್ಕೆ ಒಳಪಡುತ್ತದೆ. ” ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ – “ಸಂರಚನವಾದದ ವಿಸ್ತರಣೆಯ ರೂಪವಾಗಿ ‘ವಿಮರ್ಶಾತ್ಮಕ ಬೋಧನೆ’ ಎಂಬ ಪರಿಕಲ್ಪನೆ ಇದೆ. ಚಿಂತನಾತ್ಮಕ ಪ್ರಶ್ನೆಗಳ ಬಳಕೆಯಿಂದ ಇದನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ತಾವೇ ಕಟ್ಟಿಕೊಳ್ಳಬೇಕು.” ಎಂದು ತಿಳಿಸಿದರು.

ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ವಿದ್ಯಾರ್ಥಿಶಿಕ್ಷಕಿಯರಾದ ಅಖಿಲಾ, ಸವಿತಾ, ಪೂರ್ಣಿಮಾ, ನಿರ್ಮಲಾ ಮೊದಲಾದವರು ಪಾಲ್ಗೊಂಡಿದ್ದರು. ಉಪನ್ಯಾಸಕ ಶ್ರೀ.ಜಿ.ರಾಘವೇಂದ್ರ ಹೇರ್ಳೆ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ.ಉಷಾ ಎಚ್. ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ.ಕುಶಾಲಿನಿ ಸಿ.ಎನ್. ಅವರು ಕಾರ್‍ಯಕ್ರಮ ನಿರ್ವಹಿಸಿದರು.

‘ಬೋಧಕರು-ಬೋಧನೆ’ – ವಿಷಯ ಮಂಡನೆ

ಡಾ: ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ನೂತನ ಪ್ರಶಿಕ್ಷಣಾರ್ಥಿಗಳಿಗಾಗಿ ‘ಬೋಧಕರು-ಬೋಧನೆ – ಬಗ್ಗೆ ನನ್ನ ವಿಚಾರಗಳು’ ಎಂಬ ವಿಷಯವನ್ನು ಕುರಿತು ವಿಷಯ ಮಂಡನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಮಾಧವ ಮಂದಿರ ಸಭಾಭವನದಲ್ಲಿ ನಡೆದ ಈ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್‍ಯರಾದ ಡಾ: ಮಹಾಬಲೇಶ್ವರ ರಾವ್ ಅವರು ವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ಕು: ರಮ್ಯಾ ಪಿ, ಕು: ಲವೀನಾ ಜಾನೆಟ್ ಅರೋಜ, ಕು: ಜಯಂತಿ ಮರಾಠಿ, ಕು: ಪವಿತ್ರಾ ಗಾಂವ್ಕರ್, ಶ್ರೀ.ವಿಕಾಸ್ ಮೇಟಿ ಅವರು ಬೋಧಕರು ಮತ್ತು ಬೋಧನೆಯ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ: ಮಹಾಬಲೇಶ್ವರ ರಾವ್ ಅವರು ಮಾತನಾಡುತ್ತಾ – “ ಬೋಧನೆ ಮತ್ತು ಬೋಧಕ ಎಂದಾಗ ಅದರಲ್ಲಿ ನಾನಾ ಸಂಗತಿಗಳಿವೆ. ತುಂಬಾ ವಿಸ್ತಾರವೂ, ವೈವಿಧ್ಯಮಯವೂ ಆದ ಈ ಕ್ಷೇತ್ರದಲ್ಲಿ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಗುಣ ವಿದ್ಯಾರ್ಥಿ ಶಿಕ್ಷಕರಲ್ಲಿ ಇರಬೇಕು. ವ್ಯಕ್ತಿತ್ವ ನಿರ್ಮಾಣ ಮಾಡುವ ವೇದಿಕೆಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಕಲೆಯನ್ನು ಎಲ್ಲರೂ ಅರಿಯಬೇಕು. ಶಿಕ್ಷಣದ ವಿವಿಧ ದಸ್ತಾವೇಜುಗಳಲ್ಲಿ ಭಾರತೀಯ ಶಿಕ್ಷಣದ ಸಂದರ್ಭದಲ್ಲಿ ಶಿಕ್ಷಕನ ಪಾತ್ರದ ಬಗ್ಗೆ ಅದ್ಭುತವಾದ ಮಾತುಗಳನ್ನು ಹೇಳಲಾಗಿದೆ. “ಭಾರತದ ಭವಿತವ್ಯವು ತರಗತಿಗಳಲ್ಲಿ ರೂಪುಗೊಳ್ಳುತ್ತದೆ.”, “ಯಾವ ರಾಷ್ಟ್ರವೂ ಕೂಡಾ ತನ್ನ ಶಿಕ್ಷಕರ ಮಟ್ಟಕ್ಕಿಂತ ಮೇಲೇರಲಾರದು” ಎಂಬಂತಹ ಮಾತುಗಳನ್ನು ನಾವು ಮತ್ತೆ ಮತ್ತೆ ಮೆಲುಕುಹಾಕಬೇಕಿದೆ. ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ನಿಜವಾದ ಪ್ರಭಾವವನ್ನು ಬೀರಿದ್ದರೆ ಅಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಜೀವಮಾನ ಪರ್ಯಂತ ಮರೆಯುವುದಿಲ್ಲ. ಅಧ್ಯಾಪಕರು ರಾಷ್ಟ್ರೀಯ ಪ್ರಜ್ಞೆಯ ಅಂತ:ಸಾಕ್ಷಿಯ ಆಧಾರ ಸ್ತಂಭ. ಬೋಧನೆಯು ಹಲವು ಕೌಶಲಗಳ ಸಂಗಮ. ಮಾಹಿತಿಯ ರವಾನೆಯ ಬೋಧನೆಗಿಂತ ವಿಚಾರ ವಿನಿಮಯದ ಸಾಧನವಾದ, ವರ್ತನೆಯ ಪರಿವರ್ತನೆಯ ಮಾರ್ಗವಾದ ಬೋಧನೆ ಹೆಚ್ಚು ಮೌಲಿಕವಾದುದು. ಅಧ್ಯಾಪಕನೆಂದರೆ ಕಲಿಕೆಯನ್ನು ಅನುಕೂಲಿಸುವವನು. ಮಗುವು ತನ್ನ ಜ್ಞಾನವನ್ನು ತಾನೇ ಸೃಷ್ಠಿಸಿಕೊಳ್ಳುವಂತೆ ಮಾಡುವವನು. ಮಗುವು ಜ್ಞಾನದ ನಿರ್ಮಾಪಕನಾದರೆ ಶಿಕ್ಷಕನು ಜ್ಞಾನದ ಸಹನಿರ್ಮಾಪಕ. ವಿಷಯದ ಅಂತಃಸತ್ತ್ವವನ್ನು ಗ್ರಹಿಸಿ ಪಠ್ಯಪುಸ್ತಕದ ಆಚೆ ಶಿಕ್ಷಕರ ದೃಷ್ಟಿ ಹೊರಳುವುದು ಬಹಳ ಮುಖ್ಯ” ಎಂದು ಅಭಿಪ್ರಾಯ ಪಟ್ಟರು.

ವಿದ್ಯಾರ್ಥಿ ಶಿಕ್ಷಕಿ ಕು: ಜಾನೆಟ್ ಎಲ್. ಡಿಸಿಲ್ವಾ ಅವರು ಸ್ವ್ವಾಗತಿಸಿದರು. ಕು: ಪಲ್ಲವಿ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಶೈಲಾ ಡಿ’ಸೋಜ ಅವರು ಕಾರ್ಯಕ್ರಮ ನಿರ್ವಹಿಸಿದರು.