ನಾನೇಕೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡೆ?

“ಆಧುನಿಕೋತ್ತರ ಯುಗದ ಶಿಕ್ಷಕರು ನಿರಂತರ ಬದಲಾಗುತ್ತಿರುವ,ಬೆಳೆಯುತ್ತಿರುವ ತಂತ್ರಜ್ಞಾನದ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ.ತಂತ್ರಜ್ಞಾನಕ್ಕೆ ಬಲಿಯಾಗದೆ ಅದನ್ನು ಕಲಿಕೆಯ ಅಗತ್ಯಗಳಿಗೆ ತಕ್ಕಂತೆ ಒಲಿಸಿಕೊಳ್ಳಬೇಕಾಗಿದೆ.ಸಂವಹನದ ಮರ್ಮವನ್ನು ಅರಿಯಬೇಕಾಗಿದೆ” ಎಂದು ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ
ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ನುಡಿದರು.ಅವರು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ ನಾನೇಕೆ ಶಿಕ್ಷಕ
ವೃತ್ತಿಯನ್ನು ಆಯ್ದುಕೊಂಡೆ?’ ಎಂಬ ಅಭಿಪ್ರಾಯ ವಿನಿಮಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡುತ್ತಿದ್ದರು.ವಿದ್ಯಾರ್ಥಿ – ಶಿಕ್ಷಕರಾದ ತನ್ವಿ ವಿಶಿಷ್ಟ ಹೇಮಂತ್,ಸಬೀನಾ,ರಮ್ಯ.ಜೆ,ಕಿರಣ್ ಕುಮಾರ್ ಮತ್ತು
ಪರಶು.ಡಿ.ಎಂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಶಾ ಫೆರ್ನಾಂಡಿಸ್ ಸ್ವಾಗತ ಕೋರಿದರೆ ದೀಪ್ತಿ ವಸಂತ್
ಧನ್ಯವಾದ ಸಲ್ಲಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಶಿಕ್ಷಣ ಕಾಲೇಜಿನಲ್ಲಿ 'ಜನಶತ್ರು' ನಾಟಕ ಪ್ರದರ್ಶನ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ತುಮರಿಯ ‘ ಕಿನ್ನರ ಮೇಳ’ದವರಿಂದ ‘ಜನಶತ್ರು’ ಎಂಬ ನಾಟಕ ಪ್ರದರ್ಶಿತಗೊಂಡಿತು. ಆಧುನಿಕ ರಂಗಭೂಮಿಯ ಹರಿಕಾರನೂ ವಾಸ್ತವವಾದದ ಪಿತಾಮಹನೂ ಆದ ಹೆನ್ರಿಕ್ ಇಬ್ಸನ್ ವಿರಚಿತ ‘ ಆ್ಯನ್ ಎನಿಮಿ ಆಫ್ ದ ಪೀಪಲ್ ‘ ನಾಟಕವನ್ನು ಆಧರಿಸಿದ ಈ ಕನ್ನಡ ನಾಟಕವನ್ನು ರಚಿಸಿ ನಿರ್ದೇಶನ ಮಾಡಿದವರು ಎಸ್.ಸುರೇಂದ್ರನಾಥ್.ಕೇವಲ ಐದೇ ಪಾತ್ರಗಳಿರುವ,ಸರಳ ರಂಗಸಜ್ಜಿಕೆಯ,ತೆಳುವಾದ ಕಥಾಹಂದರದ ಈ ನಾಟಕ ದುಡ್ಡಿನ ಅಹಂಕಾರಕ್ಕೆ ಬಿಕರಿಯಾದ ಬಹುಮತ ಹಾಗೂ ಬಹುಮತವಾದದ ವಿರುದ್ಧ ವ್ಯಕ್ತಿ ಒಂಟಿಯಾದರೂ ಸರಿ ತಾನು ಕಂಡ ಸತ್ಯದ ಪ್ರತಿಪಾದನೆ ಮಾಡಲೇಬೇಕು; ಒಂಟಿ ದನಿ ದುರ್ಬಲ ದನಿಯಲ್ಲ ಎಂಬುದನ್ನು ನಿರೂಪಿಸಲೇಬೇಕು ಎಂಬ ಪ್ರಬಲಸಂದೇಶವನ್ನು ನೀಡುತ್ತದೆ ಎಂದು ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ನುಡಿದು ಕಿನ್ನರ ಮೇಳ, ತುಮರಿ ಮಕ್ಕಳ ರಂಗಭೂಮಿಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿ ಸ್ವಾಗತ ಕೋರಿದರು.ವಿದ್ಯಾರ್ಥಿ ಶಿಕ್ಷಕರಿಗೆ ಇದೊಂದು ಅನನ್ಯ ಅನುಭವವಾಗಿತ್ತು.

ಬಿಎಡ್ ವ್ಯಾಸಂಗ ಕ್ರಮ ಪರಿಚಯ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನೂತನ ವಿದ್ಯಾರ್ಥಿ ಶಿಕ್ಷಕರಿಗಾಗಿ ಒಂದು ದಿನದ
ವ್ಯಾಸಂಗಕ್ರಮ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಾಲೇಜಿನ ಸಂಸ್ಥಾಪಕರಾದ ದಿ ಮಾಧವ ಪೈ ಯವರ ದೂರದರ್ಶಿತ್ವ,ಕನಸುಗಾರಿಕೆ,ಕ್ರತು ಶಕ್ತಿ ಹಾಗೂ ದಣಿವರಿಯದ ದುಡಿಮೆಯಿಂದಾಗಿ ಅಖಂಡ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ ಎಂದರಲ್ಲದೆ ಕಾಲೇಜಿನ ಇತಿಹಾಸ ಹಾಗೂ ಪರಂಪರೆಯನ್ನು ಕುರಿತು ಹೆಚ್ಚಿನ ಬೆಳಕು ಚೆಲ್ಲಿದರು.ಬಳಿಕ ಉಪನ್ಯಾಸಕಿಯರಾದ ಧನಲಕ್ಷ್ಮಿ,ಪ್ರೀತಿ ಎಸ್ ರಾವ್,ಉಷಾ ಎಚ್,ರೂಪಾ ಕೆ ,ಮಮತಾ ಸಾಮಂತ್ ಮತ್ತು ಗ್ರಂಥಪಾಲಕ ವಿಜಯಕುಮಾರ್ ಬಿಎಡ್ ಅಧ್ಯಯನದ ವಿವಿಧ ಅಂಗಗಳನ್ನು ಪರಿಚಯಿಸಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾರ್ಥನೆ,ಶಿಸ್ತು, ಸಮವಸ್ತ್ರ ಹಾಗು ಸಹಪಠ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿ ಶಿಕ್ಷಕರಿಗೆ ಸೂಕ್ತ ಮಾಹಿತಿ ಒದಗಿಸಲಾಯಿತು.